“ದಿ ಆಲ್ಕೆಮಿಸ್ಟ್’ನಿಂದ ಹೀರೋ ಆದ ರಿಕ್ಷಾ ಚಾಲಕ
Team Udayavani, Sep 7, 2021, 7:30 AM IST
ಕೊಚ್ಚಿ: ಕೇರಳದ ರಿಕ್ಷಾ ಚಾಲಕನೊಬ್ಬ ತನ್ನ ಆಟೋ ಹಿಂದೆ ಬರೆದ ಒಂದು ಪದವನ್ನು ಟ್ವಿಟರ್ ಜಗತ್ತು ಕೊಂಡಾಡಿದೆ. ಚಾಲಕ ಪ್ರದೀಪ್ “ದಿ ಆಲ್ಕೆಮಿಸ್ಟ್’ ಎಂದು ರಿಕ್ಷಾದ ಹಿಂದೆ ಬರೆಸಿದ್ದ. ಇದು ಬ್ರೆಜಿಲ್ ಮೂಲದ ಖ್ಯಾತ ಕಾದಂಬರಿಕಾರ ಪೌಲ್ ಕೊಯೆಲ್ಹೋನ ಸುಪ್ರಸಿದ್ಧ ಕಾದಂಬರಿಯ ಶೀರ್ಷಿಕೆ.
ಆಟೋ ಬರಹದ ಫೋಟೋ ವೈರಲ್ ಆಗಿ, ಕಾದಂಬರಿಕಾರನನ್ನು ತಲುಪಿದ್ದು, “ಥ್ಯಾಂಕ್ಯೂ ಇಂಡಿಯಾ, ಕೇರಳ… ಫೋಟೋ ಹಾಕಿಕೊಂಡಿದ್ದಕ್ಕೆ ಧನ್ಯವಾದಗಳು’ ಎಂದು ಪೌಲ್ ಟ್ವೀಟ್ ಮಾಡಿದ್ದಾರೆ. “ದಿ ಆಲ್ಕೆಮಿಸ್ಟ್’ನ ಮಲಯಾಳಂ ಅನುವಾದ ಓದಿದ ಬಳಿಕ, ಪ್ರದೀಪ್ 10 ವರ್ಷಗಳ ಹಿಂದೆ ಈ ಶೀರ್ಷಿಕೆಯನ್ನು ಬರೆಸಿದ್ದರು.
“ಆಲ್ಕೆಮಿಸ್ಟ್’ನಲ್ಲೇನಿದೆ?: ಇದು ಬದುಕು ಬದಲಿಸಬಲ್ಲಂಥ ಕಾದಂಬರಿ. ಕನಸಿನಲ್ಲಿ ಕಂಡ ಗುಪ್ತನಿಧಿಗಾಗಿ ಪ್ರಪಂಚವನ್ನೆಲ್ಲ ಸುತ್ತಾಡುವ ಕುರಿಗಾಯಿ ಸ್ಯಾಂಟಿಯಾಗೋನ ವಿಸ್ಮಯ ಕಾರಿ ಕಥೆ ಜೀವನತತ್ತ್ವಗಳ ರಸದೌತಣ.