ಚೀನ ಅಷ್ಟೇ ಅಲ್ಲ, ಭಾರತೀಯರಿಂದಲೂ ಲಡಾಖ್‌ಗೆ ಅಪಾಯ!

Team Udayavani, Nov 4, 2019, 5:30 AM IST

ಜಮ್ಮು-ಕಾಶ್ಮೀರದ ಭಾಗವಾಗಿದ್ದು ದಶಕಗಳಿಂದ ಅಭಿವೃದ್ಧಿಯಿಂದ ವಂಚಿತವಾಗಿದ್ದ ಲಡಾಖ್‌ ಈಗ ಕೇಂದ್ರಾಡಳಿತ ಪ್ರದೇಶವಾಗಿದೆ. ತನ್ನ ಪ್ರಾಕೃತಿಕ ಸೌಂದರ್ಯದಿಂದ ಜಗದ್ವಿಖ್ಯಾತವಾಗಿರುವ ಲಡಾಖ್‌ ನಿಸ್ಸಂಶಯವಾಗಿಯೂ ಈಗ ಖಾಸಗಿ ಟೂರಿಸಂ ಉದ್ಯಮಗಳಿಗೆ ಬಾಗಿಲು ತೆರೆಯಲಿದೆ. ಈಗ ಲಡಾಖ್‌ನಲ್ಲಿ ಪ್ರವಾಸೋದ್ಯಮ ಬೆಳೆಯಲಿದೆ ಎಂದು ಸಹ ಭಾರತೀಯರು ಸಂತೋಷಪಡುವ ವೇಳೆಯಲ್ಲೇ, ಇದೇ ಸಂಗತಿ ಅಲ್ಲಿನ ನಿವಾಸಿಗಳ ಕಳವಳಕ್ಕೂ ಕಾರಣವಾಗಿದೆ. ಏಕೆಂದರೆ ಪ್ರವಾಸೋದ್ಯಮವೇ ಆ ಪ್ರದೇಶಕ್ಕೆ ಕಂಟಕವಾಗುತ್ತಿದೆ. ಲಡಾಖ್‌ ಒಂದು ಕಾಲಕ್ಕೆ ಜನರೇ ಇಲ್ಲದೆ ಸ್ವತ್ಛವಾಗಿತ್ತು. ಅದರೆ, ಯಾವಾಗ 2009ರಲ್ಲಿ “ತ್ರೀ ಇಡಿಯಟ್‌’Õ ಸಿನೆಮಾ ಬಂದಿತೋ ಅಂದಿನಿಂದ ಭಾರತದ ಇತರೆ ರಾಜ್ಯಗಳವರಿಗೆ ಲಡಾಖ್‌ ಕ್ರೇಜ್‌ ಆರಂಭವಾಯಿತು. ಅದರಲ್ಲೂ, ತ್ರೀ ಇಡಿಯಟ್ಸ್‌ ಸಿನೆಮಾದಲ್ಲಿ ಬಂದ ರಮಣೀಯ “ಪ್ಯಾಂಗಾಂಗ್‌ ಲೇಕ್‌’ ನೋಡಲು ಜನ ಮುಗಿಬೀಳಲಾರಂಭಿಸಿದರು. ಖಾಲಿ ಹೊಡೆಯುತ್ತಿದ್ದ ಈ ಪ್ರದೇಶಕ್ಕೀಗ ನಿತ್ಯ ಕನಿಷ್ಠ 600 ವಾಹನಗಳು ಬರುತ್ತಿವೆಯಂತೆ. ಪ್ರವಾಸಿಗರಿಂದಾಗಿ ಈ ಭಾಗ ವೇಗವಾಗಿ ಕಲುಷಿತವಾಗುತ್ತಿದ್ದು, ಪ್ಲಾಸ್ಟಿಕ್‌ನ ಬೃಹತ್‌ ಬೆಟ್ಟಗಳೇ ಸೃಷ್ಟಿಯಾಗುತ್ತಿವೆ, ವಾಯುಮಾಲಿನ್ಯ ಹೆಚ್ಚುತ್ತಿದೆ. ಕಳೆದ ವರ್ಷ 2,77,255 ಪ್ರವಾಸಿಗರು ಲಡಾಖೆY ಭೇಟಿ ಕೊಟ್ಟಿ¨ªಾರೆ. ಕೇಂದ್ರಾಡಳಿತ ಪ್ರದೇಶವಾದ ನಂತರದಿಂದ ಈ ಸಂಖ್ಯೆ ಮತ್ತಷ್ಟು ಅಧಿಕವಾಗುವ ಸಾಧ್ಯತೆ ಇದೆ.

ಪರಿಣಾಮವಾಗಿ, ಲಡಾಖ್‌ನ ಮೂಲ ಸ್ವರೂಪಕ್ಕೆ ಹಾನಿಯಾಗದಂತೆ ಅದರ ಅಭಿವೃದ್ಧಿ ಸಾಧ್ಯವೇ? ಪ್ರವಾಸೋದ್ಯಮವು ಆ ಪ್ರದೇಶದ ಕುತ್ತಿಗೆ ಹಿಚುಕದಂತೆ ಹೇಗೆ ನೋಡಿಕೊಳ್ಳುವುದು ಎನ್ನುವ ಪ್ರಮುಖ ಪ್ರಶ್ನೆಗಳೀಗ ಕಾಡುತ್ತಿವೆ…

ಲಡಾಖ್‌ಗೆ ಮುಳುವಾದ ತ್ರೀ ಈಡಿಯಟ್ಸ್‌
2009ರಲ್ಲಿ ಬಂದ ತ್ರೀ ಈಡಿಯಟ್ಸ್‌ ಸಿನೆಮಾದ ಕೊನೆಯ ದೃಶ್ಯ “ಪ್ಯಾಂಗಾಂಗ್‌ ಲೇಕ್‌’ನಲ್ಲಿ ಚಿತ್ರೀಕರಣಗೊಂಡಿತ್ತು. ವಧುವಿನ ವೇಷಭೂಷಣದಲ್ಲಿ ಕರೀನಾ ಕಪೂರ್‌ ಸ್ಕೂಟರ್‌ ಮೇಲೆ ಹತ್ತಿ ಬಂದು, ಆಮಿರ್‌ ಖಾನ್‌ನನ್ನು ಚುಂಬಿಸುವ ದೃಶ್ಯ ಇಲ್ಲೇ ಚಿತ್ರಿತವಾಗಿತ್ತು. ಈ ಸಿನೆಮಾ ಹಿಟ್‌ ಆದದ್ದೇ, ಈ ಪ್ರದೇಶಕ್ಕೆ ಪ್ರವಾಸಿಗರ ಸಂಖ್ಯೆ ವಿಪರೀತವಾಗಿಬಿಟ್ಟಿತು. ಈ ಸಿನೆಮಾ ಬಿಡುಗಡೆಗೂ ಮುನ್ನ ಕೇವಲ 4 ಲಕ್ಷ ಪ್ರವಾಸಿಗರಷ್ಟೇ ಲಡಾಖ್‌ಗೆ(ಲೇಹ್‌) ಭೇಟಿಕೊಟ್ಟಿದ್ದರು. ಆದರೆ 2011ರ ವೇಳೆಗೆ(ಸಿನೆಮಾ ನಂತರ) ಪ್ರವಾಸಿಗರ ಸಂಖ್ಯೆ 16,00,000ಕ್ಕೆ ಏರಿಬಿಟ್ಟಿತು. ಪ್ಯಾಂಗಾಂಗ್‌ ಕೆರೆಗೆ ಇನ್ನಿತರ ಕೆರೆಗಳೂ ಬೆಸೆದುಕೊಂಡಿದ್ದು, ಅವುಗಳೀಗ ಪ್ಲಾಸ್ಟಿಕ್‌ ಬಾಟಲಿಗಳು, ಚಿಪ್ಸ್‌ ಪ್ಯಾಕೆಟ್‌ಗಳನ್ನು ಹೊತ್ತು ಹರಿಯಲಾರಂಭಿಸಿವೆ. ಲಡಾಖ್‌ ಕೆಲವು ವಿಶಿಷ್ಟ ಸಸ್ಯ ಪ್ರಭೇದಗಳ ನೆಲೆಯಾಗಿದ್ದು, ಕಳೆದ ಎರಡು ವರ್ಷಗಳಿಂದ ಕೆಲವು ಸಸ್ಯಗಳು ಕಣ್ಮರೆಯಾಗಿಬಿಟ್ಟಿವೆ. ಪರಿಸ್ಥಿತಿ ಮತ್ತಷ್ಟು ಹದಗೆಡಬಾರದು ಎಂದರೆ, ಲಕ್ಷದ್ವೀಪ್‌ನಂತೆ ಲಡಾಖ್‌ನಲ್ಲೂ ಹಲವು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೆ ತರಬೇಕು, ಇಲ್ಲದಿದ್ದರೆ ಈ ಸ್ವರ್ಗ ಸದೃಶ ಪ್ರದೇಶ, ಕೆಲವೇ ವರ್ಷಗಳಲ್ಲಿ ನರಕವಾಗಲಿದೆ ಎನ್ನುತ್ತಾರೆ ಪರಿಸರವಾದಿಗಳು.

30,000 ಪ್ಲಾಸ್ಟಿಕ್‌ ಬಾಟಲಿ ಇದು ಪ್ರತಿ ದಿನದ ಸ್ಥಿತಿ!
ಲಡಾಖ್‌ನ ರಾಜಧಾನಿ ಲೇಹ್‌ ತನ್ನ ರಮಣೀಯ ಪರ್ವತ ಶಿಖರಗಳಿಂದ ಪ್ರಖ್ಯಾತವಾಗಿದೆ. ಇಲ್ಲಿ ಭಾರತದ ಇತರೆ ರಾಜ್ಯಗಳಿಂದ ಪ್ರವಾಸಿಗರ ಸಂಖ್ಯೆ ವಿಪರೀತವಾಗುತ್ತಿದ್ದು, ಇವರಿಂದ ಸೃಷ್ಟಿಯಾಗುತ್ತಿರುವ ಪ್ಲಾಸ್ಟಿಕ್‌ ಮತ್ತು ಇತರೆ ತ್ಯಾಜ್ಯಗಳನ್ನು ಲೇಹ್‌ ಸಮೀಪದ ಡಿಸ್ಕಿಟ್‌ ತ್ಸಾಲ್‌ನ “ಬಾಂಬ್‌ ಗಾರ್ಡ್‌’ ಎಂಬಲ್ಲಿ ಎಸೆಯಲಾಗುತ್ತಿದೆ. ಇಲ್ಲಿ ಕಸದ ಬೆಟ್ಟಗಳೇ ನಿರ್ಮಾಣವಾಗುತ್ತಿವೆೆ. ಪ್ರತಿ ದಿನ ಕನಿಷ್ಠ 30,000 ಪ್ಲಾಸ್ಟಿಕ್‌ ಬಾಟಲ್‌ಗಳು ಶೇಖರಣೆಯಾಗುತ್ತಿವೆ!

ಶಾಲೆಗೂ ಪ್ರವಾಸಿಗರ ಕಾಟ
ತ್ರೀ ಈಡಿಯಟ್ಸ್‌ ಸಿನೆಮಾದಿಂದ ಪ್ರಖ್ಯಾತಿ ಪಡೆದ ಮತ್ತೂಂದು ಜಾಗವೆಂದರೆ, ಡ್ರಕ್‌ ಪದ್ಮಾ ಕಾರ್ಪೋ ಶಾಲೆ. ತನ್ನ ಸ್ವತ್ಛತೆಯಿಂದ, ಸೌಂದರ್ಯದಿಂದ, ಪರಿಸರ ಸ್ನೇಹಿ ನಿರ್ಮಾಣಗಳಿಂದ ಹೆಸರು ಗಳಿಸಿರುವ ಈ ಶಾಲೆಗೆ ಅದರ ಪ್ರಖ್ಯಾತಿಯೇ ಮುಳುವಾಗಿದೆ. ಸಿನೆಮಾದಲ್ಲಿನ ಪಾತ್ರ ಚತುರ್‌, ಗೋಡೆಗೆ ಮೂತ್ರವಿಸರ್ಜಿಸಲು ಹೋಗಿ ಕರೆಂಟ್‌ ಹೊಡೆಸಿಕೊಳ್ಳುವ ಚಿತ್ರೀಕರಣ ಇದೇ ಶಾಲೆಯಲ್ಲಿ ನಡೆದದ್ದು. ತ್ರೀ ಈಡಿಯಟ್ಸ್‌ ಸಿನೆಮಾ ಬಂದಾಗಿನಿಂದಲೂ ಈ ಶಾಲೆಯನ್ನು ನೋಡಲು ಜನ ಮುಗಿಬೀಳುತ್ತಿದ್ದಾರಂತೆ. ಅದರಲ್ಲೂ ಈ ದೃಶ್ಯ ನಡೆಯುವ ಗೋಡೆಗೆ ರಾಂಚೋ ಗೋಡೆ ಎಂದೇ ಹೆಸರಿದೆ. ಆರಂಭದ‌ಲ್ಲಂತೂ ಶಾಲೆನೋಡಲುನಿತ್ಯ 800-1000 ಪ್ರವಾಸಿಗರು ಬರುತ್ತಿದ್ದರು. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿತ್ತು, ಅಲ್ಲದೇ ಈ ಪ್ರವಾಸಿಗಳು ಶಾಲೆಯ ಆವರಣದಲ್ಲಿ ಪ್ಲಾಸ್ಟಿಕ್‌ ಎಸೆಯುತ್ತಿದ್ದರು, ಮಕ್ಕಳಿಗಾಗಿ ಮೀಸಲಾದ ಶೌಚಾಲಯಗಳನ್ನೂ ಬಳಸಿ ಗಲೀಜು ಮಾಡುತ್ತಿದ್ದರು. ಈ ಕಾರಣಕ್ಕಾಗಿಯೇ, ರಾಂಚೋ ಗೋಡೆಯನ್ನೇ ನಾವು ಸ್ಥಳಾಂತರಿಸಿದೆವು. ಈಗ ಪ್ರವಾಸಿಗರ‌ ಪ್ರವೇಶವನ್ನೂ ಸಂಪೂರ್ಣ ನಿಷೇಧಿಸಲು ತೀರ್ಮಾನಿಸಿದ್ದೇವೆ ಎನ್ನುತ್ತಾರೆ ಶಾಲೆಯ ಪ್ರಾಂಶುಪಾಲ.

ಎದುರಾಗಿದೆ ನೀರಿನ ಅಭಾವ
ಶೀತಲ ಮರುಭೂಮಿಯಾಗಿರುವ ಲಡಾಖ್‌, ನೀರಿನ ಅಗತ್ಯವನ್ನು ಕೆರೆಗಳಿಂದ ಪೂರೈಸಿಕೊಳ್ಳುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನೀರಿನ ಬಳಕೆ ಪ್ರಮಾಣ ವಿಪರೀತವಾಗುತ್ತಿದೆ. ಪ್ರತಿ ವರ್ಷ ಕನಿಷ್ಠ 50-60 ಹೊಸ ಗೆಸ್ಟ್‌ಹೌಸ್‌ಗಳು ನೋಂದಣಿಯಾಗುತ್ತಿವೆ. ಡಿಸೆಂಬರ್‌ 2018ರ ವೇಳೆಗೆ ಒಟ್ಟು ಹೋಟೆಲ್‌ಗಳು ಮತ್ತು ಗೆಸ್ಟ್‌ಹೌಸ್‌ಗಳ ಪ್ರಮಾಣ 1257ಕ್ಕೆ ತಲುಪಿದೆ. ಇದು ಅಧಿಕೃತ ಅಂಕಿಸಂಖ್ಯೆ, ಅನಧಿಕೃತ ಕೆಫೆಗಳು, ಗೆಸ್ಟ್‌ಹೌಸ್‌ಗಳ ಸಂಖ್ಯೆಯೂ ವಿಪರೀತ ಇದೆ. ಇವುಗಳೆಲ್ಲ ಬೋರ್‌ವೆಲ್‌ಗಳನ್ನು ಕೊರೆಸತೊಡಗಿದ್ದು, ಅಂತರ್ಜಲ ಮತ್ತು ಕೆರೆಗಳು ಬತ್ತುತ್ತಿವೆ ಎನ್ನುತ್ತಾರೆ ಲಡಾಖ್‌ನ ಪ್ರವಾಸೋದ್ಯಮ ವಿಭಾಗದ ಮಾಜಿ ಅಧಿಕಾರಿ ತ್ಸೆರಿಂಗ್‌ . ಕೇಂದ್ರಾಡಳಿತ ಪ್ರದೇಶವಾದ ನಂತರ ಹೊರಗಿನ ಹೋಟೆಲ್‌ ಚೈನ್‌ ಗಳು ಲಡಾಖ್‌ಗೆ ಬರುವುದು ಹೆಚ್ಚುತ್ತದೆ. ಈಗಲೇ ಈ ವಿಷಯದಲ್ಲಿ ಎಚ್ಚೆತ್ತುಕೊಂಡು ಬಿಗಿ ನಿಯಮಗಳನ್ನು ತರುವ ಅಗತ್ಯವಿದೆ ಎಂದೂ ಅವರು ಎಚ್ಚರಿಸುತ್ತಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ