ಫೈರಿಂಗ್ ರೇಂಜ್‌ನಲ್ಲಿದ್ದ ಬಾಂಬ್ ಎತ್ತಿಕೊಂಡ ಇಬ್ಬರು ಅಛಾನಕ್ ಸ್ಫೋಟಕ್ಕೆ ಬಲಿ
Team Udayavani, Jul 10, 2019, 12:24 PM IST
ಅಹ್ಮದ್‌ನಗರ : ಗುಜರಿ ಅಂಗಡಿಗೆ ಮಾರಲು ಫೈರಿಂಗ್ ರೇಂಜ್ ನಿಂದ ಸಂಗ್ರಹಿಸಿ ತಂದಿದ್ದ ಸಜೀವ ಬಾಂಬ್ ಸ್ಫೋಟಗೊಂಡು ಇಬ್ಬರು ಮೃತಪಟ್ಟ ಘಟನೆ ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯಲ್ಲಿ ಇಂದು ಬುಧವಾರ ನಸುಕಿನ ವೇಳೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ 15 ಕಿ.ಮೀ. ದೂರದಲ್ಲಿನ ಖಾರೆ ಕರ್ಜೂನೆ ಎಂಬ ಗ್ರಾಮದಲ್ಲಿ ಇಂದು ಬುಧವಾರ ನಸುಕಿನ ಬುಧವಾರ ನಸುಕಿನ 4 ಗಂಟೆಯ ವೇಳೆಗೆ ಈ ಘಟನೆ ನಡೆಯಿತು ಎಂದು ಎಸ್‌ಐ ಪಿ ಎಸ್ ದಾತಾಳೆ ತಿಳಿಸಿದ್ದಾರೆ.
ಸೇನೆಯ ಫೈರಿಂಗ್ ರೇಂಜ್‌ಗೆ ಹೋಗಿದ್ದ ಅಕ್ಷಯ್ ನವನಾಥ್ ಗಾಯಕ್‌ವಾಡ್ (19) ಮತ್ತು ಸಂದೀಪ್ ಭಾವು ಸಾಹೇಬ್ ತಿರೋಡೆ (34) ಅವರು ಗುಜರಿ ಅಂಗಡಿಗೆ ಮಾರುವ ಸಲುವಾಗಿ ಅಲ್ಲಿ ಬಿದ್ದುಕೊಂಡಿದ್ದ ಸಜೀವ ಬಾಂಬ್ ಸಂಗ್ರಹಿಸಿದರು. ಇದರಿಂದ ಲೋಹವನ್ನು ಬೇರ್ಪಡಿಸುವ ವೇಳೆ ಅದು ಸ್ಫೋಟಗೊಂಡಾಗ ಅವರಿಬ್ಬರೂ ಸ್ಥಳದಲ್ಲೇ ಮೃತಪಟ್ಟರು ಎಂದು ಅಧಿಕಾರಿ ತಿಳಿಸಿದರು.
ಬಾಂಬ್ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಮೃತ ವ್ಯಕ್ತಿಗಳ ದೇಹ ಚೂರು ಚೂರಾಗಿ ಹರಡಿಕೊಂಡ ಬಿದ್ದಿತ್ತು ಎಂದವರು ಹೇಳಿದರು.