ಬಿಹಾರ ಮಹಾಘಟಬಂಧನ್‌ ಸೀಟು ಹಂಚಿಕೆ: RJD 20, ಕೈ 9, ಇತರರಿಗೆ 11

Team Udayavani, Mar 22, 2019, 12:00 PM IST

ಪಟ್ನಾ : ಬಿಹಾರದ ಮಹಾ ಘಟಬಂಧನ (ಮಹಾ ಮೈತ್ರಿ ಕೂಟ) 2019ರ ಲೋಕಸಭಾ ಚುನಾವಣೆಗಾಗಿ ಸೀಟು ಹಂಚಿಕೆ ಸೂತ್ರವನ್ನು ಇಂದು ಶುಕ್ರವಾರ ಪ್ರಕಟಿಸಿದೆ.

ಆ ಪ್ರಕಾರ ರಾಷ್ಟ್ರೀಯ ಜನತಾ ದಳ ಕನಿಷ್ಠ 20 ಸೀಟುಗಳಲ್ಲಿ, ಕಾಂಗ್ರೆಸ್‌ 9 ಸೀಟುಗಳಲ್ಲಿ, ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ) ಐದು ಸೀಟುಗಳಲ್ಲಿ, ಹಿಂದುಸ್ಥಾನ ಆವಾಮ್‌ ಮೋರ್ಚಾ (ಎಚ್‌ಎಎಂ) ಮತ್ತು ವಿಕಾಶೀಲ್‌ ಇನ್‌ಸಾನ್‌ ಪಾರ್ಟಿ (ವಿಐಪಿ) ತಲಾ ಮೂರು ಸೀಟುಗಳಲ್ಲಿ ಮತ್ತು ಸಿಪಿಐ ಲಿಬರೇಶನ್‌ ಒಂದು ಸೀಟಿನಲ್ಲಿ (ಆರ್‌ಜೆಡಿ ಕೋಟಾದಡಿ) ಸ್ಪರ್ಧಿಸಲಿವೆ. 

ಶರದ್‌ ಯಾದವ್‌ ಅವರು ಆರ್‌ ಜೆ ಡಿ ಚಿಹ್ನೆಯಡಿ ಸ್ಪರ್ಧಿಸಲಿದ್ದಾರೆ ಮತ್ತು ಲೋಕಸಭಾ ಚುನಾವಣೆಯ ಬಳಿಕ ತಮ್ಮ ಲೋಕತಾಂತ್ರಿಕ ಜನತಾ ದಳವನ್ನು ಆರ್‌ಜೆಡಿ ಜತೆಗೆ ವಿಲಯನಗೊಳಿಸಲಿದ್ದಾರೆ ಎಂದು ಆರ್‌ಜೆಡಿ ರಾಷ್ಟ್ರೀಯ ವಕ್ತಾ ಮನೋಜ್‌ ಝಾ ಇಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಎಚ್‌ಎಎಂ ಮುಖ್ಯಸ್ಥ ಜೀತನ್‌ ರಾಮ್‌ ಮಾಂಜಿ ಅವರು ಗಯಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇವರ ಪಕ್ಷದ ಸಹೋದ್ಯೋಗಿ ಉಪೇಂದ್ರ ಪ್ರಸಾದ್‌, ಔರಂಗಾಬಾದ್‌ ನಿಂದ ಸ್ಪರ್ಧಿಸಲಿದ್ದಾರೆ. 

ಎನ್‌ಡಿಎ ಕೂಟ ಈಗಾಗಲೇ ತನ್ನ ಸೀಟು ಹಂಚಿಕೆ ಸೂತ್ರ ಪ್ರಕಟಿಸಿದೆ. ಆ ಪ್ರಕಾರ ಬಿಜೆಪಿ ಮತ್ತು ಜೆಡಿಯು ತಲಾ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ; ಆರು ಸೀಟುಗಳನ್ನು ಲೋಕ ಜನಶಕ್ತಿ ಪಕ್ಷಕ್ಕೆ ಕೊಡಲಾಗಿದೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ