ಸಿಎಂಪಿ ಸರ್ಕಾರಕ್ಕೆ ಕಸರತ್ತು : ನಾಡಿದ್ದು ಸೋನಿಯಾ- ಪವಾರ್‌ ಮಾತುಕತೆ ಸಾಧ್ಯತೆ

Team Udayavani, Nov 15, 2019, 7:03 AM IST

ಮುಂಬೈ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದರೂ ಇತ್ತ ಶಿವಸೇನೆ, ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿವೆ. ‘ಕನಿಷ್ಠ ಸಾಮಾನ್ಯ ಕಾರ್ಯಕ್ರಮ’ದಡಿ (ಸಿಎಂಪಿ) ಸರ್ಕಾರ ರಚಿಸಲು ರಾಜ್ಯ ಮಟ್ಟದಲ್ಲಿ ಈ ಮೂರು ಪಕ್ಷಗಳ ನಾಯಕರು ಗುರುವಾರ ಮಾತುಕತೆ ನಡೆಸಿದ್ದಾರೆ. ಸರ್ಕಾರ ರಚನೆ ಹೇಗೆ, ಏನು ಎಂಬುದು ಇನ್ನೂ ಪ್ರಾಥಮಿಕ ಹಂತದಲ್ಲಿದೆ.

ಅಂತಿಮವಾಗಿ ಇದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಕೈಗೊಳ್ಳುವ ನಿರ್ಧಾರವನ್ನು ಅವಲಂಬಿಸಿದೆ. ಶಿವಸೇನೆ ಜತೆ ಸೇರಿ ‘ಕನಿಷ್ಠ ಸಾಮಾನ್ಯ ಕಾರ್ಯಕ್ರಮ’ದಡಿ ಸರ್ಕಾರ ರಚಿಸುವ ಕುರಿತು ಎನ್‌ಸಿಪಿ ನೇತಾರ ಶರದ್‌ ಪವಾರ್‌ ಹಾಗೂ ಸೋನಿಯಾ ದೆಹಲಿಯಲ್ಲಿ ನ.17ರಂದು ಮಾತುಕತೆ ನಡೆಸುವ ಸಾಧ್ಯತೆ ಇದೆ. ಅಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಸಂಭವವಿದೆ.

ಬಿಜೆಪಿ ನಾಟಕ: ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬಿಜೆಪಿಯ ಪೂರ್ವ ನಿರ್ಧರಿತ ನಾಟಕ. ಈ ಮೂಲಕ ಪರೋಕ್ಷವಾಗಿ ಬಿಜೆಪಿ ಅಧಿಕಾರ ಪಡೆದುಕೊಂಡಿದೆ. ರಾಷ್ಟ್ರಪತಿ ಆಳ್ವಿಕೆ ಬಳಿಕ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಶಿವಸೇನೆ ಮುಖವಾಣಿ ಸಾಮ್ನಾ ಹರಿಹಾಯ್ದಿದೆ.

ಮೋದಿಗೆ ತಿಳಿಸಬೇಕಿತ್ತು: ಚುನಾವಣೆಗೂ ಮುನ್ನ ನಾವು ಮಾಡಿಕೊಂಡಿದ್ದ ಸಮಾನ ಅಧಿಕಾರ ಒಪ್ಪಂದವನ್ನು ಅಮಿತ್‌ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಿಳಿಸಿದ್ದರೆ ಇಂದು ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಸಂಸದ ‘ಸಂಜಯ್‌ ರಾವತ್‌ ತಿಳಿಸಿದ್ದಾರೆ. ಸೈದ್ಧಾಂತಿಕವಾಗಿ ವಿರೋಧಿಸುತ್ತಿದ್ದ ಕಾಂಗ್ರೆಸ್‌ ಹಾಗೂ ಎನ್‌ಸಿಪಿ ಜೊತೆ ಸೇರಿ ಸರ್ಕಾರ ರಚಿಸುವ ಪ್ರಕ್ರಿಯೆ ಪ್ರತಿಕ್ರಿಯಿಸಿರುವ ರಾವತ್‌, ಇದರಲ್ಲಿ ಅವಮಾನ, ನಾಚಿಕೆ ಪಡುವಂಥದ್ದೇನೂ ಇಲ್ಲ ಎಂದು ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ