ಮಾರುತಿಗೆ ಈಗ “ಜಾಟ್’ ಜಾತಿ ಸರ್ಟಿಫಿಕೇಟ್!
Team Udayavani, Dec 22, 2018, 10:43 AM IST
ಲಕ್ನೋ: ದಲಿತ, ಆದಿವಾಸಿ, ಜೈನ ಧರ್ಮೀಯ, ಮುಸಲ್ಮಾನ ಹೀಗೆ ಹಲವಾರು ರಾಜಕೀಯ, ಧಾರ್ಮಿಕ ಮುಖಂಡರಿಂದ ನಾನಾ ಜಾತಿ, ಧರ್ಮಗಳ ಸರ್ಟಿಫಿಕೇಟ್ ಪಡೆದಿರುವ ಹನುಮಂತನಿಗೆ ಈಗ ಹೊಸ ಜಾಟ್ ಜನಾಂಗ ಪ್ರಮಾಣ ಪತ್ರ ಸಿಕ್ಕಿದೆ!
ಈ ಪ್ರಮಾಣ ಪತ್ರ ನೀಡಿರುವುದು ಉತ್ತರ ಪ್ರದೇಶದ ಧಾರ್ಮಿಕ ದತ್ತಿ ಇಲಾಖೆ ಸಚಿವ ಲಕ್ಷ್ಮೀನಾರಾಯಣ ಚೌಧರಿ. ತಮ್ಮ ಹೇಳಿಕೆಗೆ ಸಮರ್ಥನೆಯೂ ನೀಡಿರುವ ಅವರು, “ರಾಮಾಯಣದಲ್ಲಿ ಸೀತೆ ಅಪಹೃತವಾದಾಗ ರಾಮನ ಪರಿಚಯವೇ ಇಲ್ಲದಿದ್ದರೂ ಹನುಮಂತ ಆತನ ನೆರವಿಗೆ ಧಾವಿಸಿದ್ದ. ಸಮಾಜದಲ್ಲಿ ತನಗೆ ಸಂಬಂಧವೇ ಇರದ ವ್ಯಕ್ತಿಗಳಾದರೂ ಸರಿ, ಅವರಿಗೆ ಅನ್ಯಾಯವಾದರೆ ಅಲ್ಲಿಗೆ ತೆರಳಿ ನ್ಯಾಯದ ಪರ ನಿಲ್ಲುವುದು ಜಾಟ್ ಜನಾಂಗದ ರಕ್ತದ ಗುಣ. ಹಾಗಾಗಿ, ಹನುಮಂತ ಜಾಟ್ ಸಮುದಾಯದವನೇ ಆಗಿದ್ದಾನೆ” ಎಂದಿದ್ದಾರೆ.
ಚೀನಕ್ಕೆ ಸೇರ್ಪಡೆ: ಇದೆಲ್ಲದರ ನಡುವೆಯೇ, ಬಿಜೆಪಿ ನಾಯಕ ಕೀರ್ತಿ ಆಜಾದ್, ಹನುಮಂತನನ್ನು ಭಾರತದಿಂದಲೇ ಹೊರ ಹಾಕಿದ್ದು, ಆತ ಚೀನದವನು ಎಂದಿದ್ದಾರೆ! “ಇತ್ತೀಚೆಗೆ ಕೆಲವು ಚೀನೀ ಪ್ರಜೆಗಳು ಹನುಮಂತ ನಮ್ಮವ ಎನ್ನಲಾರಂಭಿಸಿದ್ದಾರೆ’ ಎಂದು ಜೋಕ್ ಮಾಡಿದ್ದಾರೆ.