ಖ್ಯಾತ ಗಣಿತಜ್ಞ ವಸಿಷ್ಠ ನಾರಾಯಣ್‌ ಸಿಂಗ್‌ ಇನ್ನಿಲ್ಲ

Team Udayavani, Nov 15, 2019, 12:18 AM IST

ಪಾಟ್ನಾ: ಖ್ಯಾತ ಭೌತವಿಜ್ಞಾನಿ ಐನ್‌ಸ್ಟೀನ್‌ರ ಸಾಪೇಕ್ಷ ಸಿದ್ಧಾಂತವನ್ನು ಪ್ರಶ್ನಿಸಿದ್ದ ಭಾರತದ ಹಿರಿಯ ಗಣಿತಜ್ಞ ವಸಿಷ್ಠ ನಾರಾಯಣ್‌ ಸಿಂಗ್‌ (77) ಗುರುವಾರ ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾದರು. ನಿಧನ ಹೊಂದಿದ ಗಣಿತಜ್ಞನಿಗೆ ಸಮಯಕ್ಕೆ ಸರಿಯಾಗಿ ಆಸ್ಪತ್ರೆ ಆ್ಯಂಬುಲೆನ್ಸ್‌ ಒದಗಿಸಲಿಲ್ಲ ಎಂದು ಕುಟುಂಬ ವರ್ಗ ಆರೋಪಿಸಿದೆ.

2 ಗಂಟೆಗಳ ಕಾಲ ಮೃತದೇಹವನ್ನು ಆಸ್ಪತ್ರೆಯ ಹೊರಗೆ ಇರಿಸಿ ಆ್ಯಂಬುಲೆನ್ಸ್‌ಗಾಗಿ ಕಾದೆವು. ಆದರೆ ಆಸ್ಪತ್ರೆ ಆಡಳಿತ ವರ್ಗ ನಮ್ಮ ಬೇಡಿಕೆಗೆ ಸ್ಪಂದಿಸಲಿಲ್ಲ ಎಂದು ದೂರಿದೆ. ನಾರಾಯಣ್‌ ಸಿಂಗ್‌ 40 ವರ್ಷಗಳಿಂದ ಸ್ಕಿಝೋಫ್ರೇನಿಯಾ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಗುರುವಾರ ಬೆಳಗ್ಗೆ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಅಲ್ಲಿಯೇ ಕೊನೆಯುಸಿರೆಳೆದರು.

ಇವರು ಐಐಟಿ-ಕಾನ್ಪುರ, ಕೋಲ್ಕತ್ತಾದ ಇಂಡಿಯನ್‌ ಸ್ಟಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌ ಮುಂತಾದ ಪ್ರತಿಷ್ಠಿತ ವಿವಿಗಳಲ್ಲಿ ಗಣಿತ ಬೋಧನೆ ಮಾಡಿದ್ದಾರೆ. ಇವರ ಸಾವಿಗೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಸೇರಿ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ