ಚಂದ್ರಯಾನ-2ಕ್ಕೆ ಆತಂಕ; ಗಳಗಳನೆ ಅತ್ತ ಇಸ್ರೋ ಮುಖ್ಯಸ್ಥ ಶಿವನ್ ಗೆ ಧೈರ್ಯ ತುಂಬಿದ ಮೋದಿ
Team Udayavani, Sep 7, 2019, 10:09 AM IST
ಬೆಂಗಳೂರು:ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಶುಕ್ರವಾರ ನಡುರಾತ್ರಿ ಚಂದಿರನ ಅಂಗಳಕ್ಕೆ ಇಳಿಯುತ್ತಿದ್ದ ವಿಕ್ರಮ್ ಲ್ಯಾಂಡರ್ ಇನ್ನೇನು ದಕ್ಷಿಣ ಧ್ರುವದಲ್ಲಿ ಚಂದಿರನ ನೆಲ ಮುಟ್ಟಲು 2.1 ಕಿ.ಮೀಟರ್ ಇರುವಾಗಲೇ ದಿಢೀರನೆ ಸಂಪರ್ಕ ಕಡಿದುಕೊಂಡಿತ್ತು. ಈ ಸಂದರ್ಭದಲ್ಲಿ ತೀವ್ರ ಭಾವೋದ್ವೇಗಕ್ಕೊಳಗಾದ ಇಸ್ರೋ ಮುಖ್ಯಸ್ಥ ಕೆ.ಶಿವನ್ ಅವರು ಗಳಗಳನೆ ಅಳುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಸಂತೈಸಿ ಧೈರ್ಯ ತುಂಬಿದರು.
ವಿಕ್ರಮ್ ಲ್ಯಾಂಡರ್ ಚಂದಿರನ ಅಂಗಳಕ್ಕಿಳಿಯುವ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರರು ಬೆಂಗಳೂರು ಇಸ್ರೋ ಕೇಂದ್ರದಲ್ಲಿ ಶುಕ್ರವಾರ ರಾತ್ರಿ ಕಾದು ಕುಳಿತಿದ್ದರು. ಆದರೆ ಕೊನೇ ಕ್ಷಣದಲ್ಲಿ ಚಂದಿರನ ನೆಲಸ್ಪರ್ಶಿಸುವ ಮುನ್ನವೇ ವಿಕ್ರಮ್ ಸಂಪರ್ಕ ಕಡಿತಗೊಂಡಿತ್ತು.
ಬಹುನಿರೀಕ್ಷೆಯ, ಜಗತ್ತೇ ಬೆರಗುಗಣ್ಣಿನಿಂದ ಎದುರು ನೋಡುತ್ತಿದ್ದ ಚಂದ್ರಯಾನ-2 ಮಿಷನ್ ಗೆ ಹಿನ್ನಡೆಯಾಗಿದ್ದರಿಂದ ಇಸ್ರೋ ಮುಖ್ಯಸ್ಥ ಶಿವನ್ ಅವರು ಭಾವೋದ್ವೇಗದಿಂದ ಅಳುತ್ತಿದ್ದಾಗ ಮೋದಿ ಸಂತೈಸಿ, ಚಂದ್ರನನ್ನು ತಲುಪುವ ನಮ್ಮ ಗುರಿ ಮತ್ತಷ್ಟು ಪ್ರಬಲವಾಗಿದೆ. ಎದೆಗುಂದಬೇಡಿ ಭಾರತ ನಿಮ್ಮ ಜತೆಗಿದೆ ಎಂದು ಧೈರ್ಯ ತುಂಬಿದ್ದಾರೆ.
ಬಳಿಕ ಇಸ್ರೋ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಯಾವುದಕ್ಕೂ ಎದೆಗುಂದಬೇಡಿ. ಹತಾಶರಾಗೋದು ಬೇಡ, ಮರಳಿ ಪ್ರಯತ್ನ ಮಾಡೋಣ. ಚಂದ್ರನ ಮೇಲೆ ಇಳಿಯಲು ಹೊಸ ದಾರಿ ಕಂಡು ಹುಡುಕೋಣ ಎಂದು ಧೈರ್ಯ ತುಂಬಿದ್ದರು.