ಸೊಳ್ಳೆ ಕಚ್ಚಿದಕ್ಕೆ ಪತಿಯನ್ನೇ ಒನಕೆಯಿಂದ ಥಳಿಸಿದ ಮಹಿಳೆ: ಸಾಥ್ ನೀಡಿದ ಮಗಳು

Team Udayavani, Nov 15, 2019, 9:45 AM IST

ಅಹಮದಾಬಾದ್: ವಿಚಿತ್ರವಾದ ಘಟನೆಯೊಂದರಲ್ಲಿ, ಸೊಳ್ಳೆ ಕಚ್ಚಿತೆಂದು ಮಹಿಳೆಯೋರ್ವಳು  ಮಗಳೊಂದಿಗೆ ಸೇರಿ ಒನಕೆಯಿಂದ ಪತಿಯನ್ನು ಥಳಿಸಿರುವ ಘಟನೆ ಗುಜರಾತಿನ ಅಹಮದಾಬಾದ್ ನಗರದಲ್ಲಿ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹಲ್ಲೆಗೊಳಗಾದ ವ್ಯಕ್ತಿಯನ್ನು ಭೂಪೇಂದ್ರ ಎಂದು ಗುರುತಿಸಲಾಗಿದೆ. ತಲೆಗೆ ತೀವ್ರವಾಗಿ ಹೊಡೆತ ಬಿದ್ದ ಪರಿಣಾಮ ಏಳು ಹೊಲಿಗೆ ಹಾಕಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಎಫ್ ಐ ಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಆದದ್ದೇನು ?

ಭೂಪೇಂದ್ರ ಎಲ್ ಇ ಡಿ ಗಳನ್ನು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೇ ಕಳೆದ ಏರಡು ತಿಂಗಳಿಂದ ಆದಾಯ ಕುಂಠಿತಗೊಂಡಿತ್ತು. ಪರಿಣಾಮವಾಗಿ ಮನೆಯ ವಿದ್ಯುತ್ ಬಿಲ್ ಕಟ್ಟಲು ಆಗಿರಲಿಲ್ಲ. ಹಾಗಾಗಿ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರು. ಇದರಿಂದ ಫ್ಯಾನ್ ಇಲ್ಲದೆ  ರಾತ್ರಿ ನಿದ್ರಿಸಲು ಆಗುತ್ತಿರಲಿಲ್ಲ. ಈ ಕುರಿತು ಪತ್ನಿ ಸಂಗೀತಾ ಮತ್ತು ಮಗಳು ಚೀತಲ್ ಪದೇ ಪದೇ ಬಿಲ್ ಕಟ್ಟುವಂತೆ ಒತ್ತಾಯಿಸಿದ್ದರು.

ಕಳೆದ ಮಂಗಳವಾರ ಫ್ಯಾನ್ ಇಲ್ಲದ ಕಾರಣ ಭಾರೀ ಪ್ರಮಾಣದಲ್ಲಿ ಸೊಳ್ಳೆಗಳು ಕಚ್ಚುತ್ತಿದ್ದವು. ಬುಧವಾರ ಬೆಳಗ್ಗೆ ಆಗುತ್ತಿದ್ದಂತೆ ಪತ್ನಿ ಸಂಗೀತಾ ರಾತ್ರಿಯಲ್ಲಾ ಸೊಳ್ಳೆಗಳು ಕಚ್ಚಿವೆ ಎಂದು ದೂರಿದ್ದಾಳೆ. ಇದಕ್ಕೆ ಪತಿ ನಗುತ್ತಾ ನನ್ನ ಜೊತೆ ಮಲಗಿದ್ದರೆ ಚೆನ್ನಾಗಿ ನಿದ್ದೆ ಬರುತ್ತಿತ್ತು ಎಂದು ಕಿಚಾಯಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಸಂಗೀತಾ ಅಡುಗೆ ಮನೆಯಲ್ಲಿದ್ದ ಒನಕೆ ತಂದು ಪತಿಗೆ ಚೆನ್ನಾಗಿ ಥಳಿಸಿದ್ದಾಳೆ. ಇದಕ್ಕೆ ಮಗಳೂ ಕೂಡ ಸಾಥ್ ನೀಡಿದ್ದಾಳೆ.

ಭೂಪೇಂದ್ರನ ಚೀರಾಟ ಕೇಳಿ ಅಕ್ಕಪಕ್ಕದ ಮನೆಯವರು ಓಡಿಬಂದು ರಕ್ಷಿಸಿ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ನರೋದಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ