ಮಾಸ್ಕ್ ಧರಿಸದೆ ಪ್ರಯಾಣ: 342 ರೈಲು ಪ್ರಯಾಣಿಕರಿಗೆ ದಂಡ
Team Udayavani, Nov 9, 2020, 6:59 PM IST
ಮುಂಬಯಿ: ಕಳೆದ ಐದು ದಿನಗಳಲ್ಲಿ ಮುಂಬಯಿ ರೈಲ್ವೇ ಪೊಲೀಸ್ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಫೇಸ್ ಮಾಸ್ಕ್ ಧರಿಸದೆ ಉಪನಗರ ರೈಲ್ವೇಯಲ್ಲಿ ಪ್ರಯಾಣಿಸುತ್ತಿದ್ದ 342 ಪ್ರಯಾಣಿಕರಿಗೆ ದಂಡ ವಿಧಿಸಿದ್ದಾರೆ. ನಿಲ್ದಾಣದ ಆವರಣಕ್ಕೆ ಪ್ರವೇಶಿಸಿದ ಅನಂತರ ಪ್ರಯಾಣಿಕರಲ್ಲಿ ಮಾಸ್ಕ್ಗಳನ್ನು ತೆಗೆಯುವ ಪ್ರವೃತ್ತಿಯನ್ನು ಪೊಲೀಸರು ಗಮನಿಸಿದ ಅನಂತರ ಮುಂಬಯಿ, ಥಾಣೆ ಮತ್ತು ಪಾಲ್ಗರ್‌ನಲ್ಲಿನ ಮಹಾನಗರ ಪಾಲಿಕೆ ಅಧಿಕಾರಿಗಳಿಂದ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.
ರಾಜ್ಯ ಮತ್ತು ಕೇಂದ್ರ ಸರಕಾರಿ ಸಂಸ್ಥೆಗಳು ಮತ್ತು ವಿನಾಯಿತಿ ಪಡೆದ ಖಾಸಗಿ ಸೇವೆಗಳ ಉದ್ಯೋಗಿಗಳಿಗೆ ಮಾತ್ರ ಉಪನಗರ ರೈಲ್ವೇಯಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ವಿನಾಯಿತಿ ಪಡೆಯದ ಸೇವೆಗಳಲ್ಲಿ ತೊಡಗಿರುವ ಮಹಿಳೆಯರಿಗೆ ಪೀಕ್ ಅವರ್ ಅಲ್ಲದ ಸಮಯದಲ್ಲಿ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ರೈಲುಗಳಲ್ಲಿ ಪ್ರಯಾಣಿಸಲು ಫೇಸ್ ಮಾಸ್ಕ್, ತಾಪಮಾನ ತಪಾಸಣೆ, ಮಾನ್ಯ ಗುರುತಿನ ಚೀಟಿಗಳು ಕಡ್ಡಾಯವಾಗಿವೆ. ಒಮ್ಮೆ ನಿಲ್ದಾಣದ ಆವರಣಕ್ಕೆ ಪ್ರವೇಶಿಸಲು ಅನುಮತಿ ನೀಡಿದರೆ, ಕೆಲವು ಪ್ರಯಾಣಿಕರು ತಮ್ಮ ಮಾಸ್ಕ್ಗಳನ್ನು ತೆಗೆದು ಜೇಬಿನೊಳಗೆ ಹಾಕುತ್ತಾರೆ. ಅಂತಹ ಪ್ರವೃತ್ತಿಯನ್ನು ತಡೆಯಲು ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದು ನಾವು ಮನಪಾ ಅಧಿಕಾರಿಗಳೊಂದಿಗೆ ನಡೆಸುತ್ತಿರುವ ಜಂಟಿ ಕಾರ್ಯಾಚಾರಣೆಯಾಗಿದೆ ಎಂದು ಮುಂಬಯಿ ರೈಲ್ವೇ ಪೊಲೀಸ್ ಆಯುಕ್ತ ರವೀಂದ್ರ ಸೇನ್ ಗಾಂವ್ಕರ್ ತಿಳಿಸಿದ್ದಾರೆ.
ದಂಡವನ್ನು ಪಾಲಿಕೆ ಅಧಿಕಾರಿಗಳು ಸಂಗ್ರಹಿಸುತ್ತಾರೆ. ಮುಂಬಯಿಯಲ್ಲಿ ಮಾಸ್ಕ್ ಧರಿಸದವರಿಗೆ ಬಿಎಂಸಿ 200 ರೂ. ದಂಡ ವಿಧಿಸಿದೆ. ಕಳೆದ ಬುಧವಾರದಿಂದ ಈವರೆಗೆ ಪಾಲಿಕೆ ಅಧಿಕಾರಿಗಳು ದಂಡವಾಗಿ 82,500 ರೂ. ಸಂಗ್ರಹಿಸಿದ್ದಾರೆ. ನಿಯಮ ಉಲ್ಲಂಘಿಸಿದ ಪ್ರಯಾಣಿಕರಲ್ಲಿ ಹೆಚ್ಚಿನವರು ಸಿಎಸ್‌ಎಂಟಿ, ಮುಂಬಯಿ ಸೆಂಟ್ರಲ್, ಅಂಧೇರಿ, ಬೊರಿವಲಿ ಮತ್ತು ಕಲ್ಯಾಣ್‌ನಂತಹ ಹೆಚ್ಚು ಜನದಟ್ಟಣೆ ಇರುವ ನಿಲ್ದಾಣಗಳಲ್ಲಿ ಸಿಕ್ಕಿಬಿದ್ದವರಾಗಿದ್ದಾರೆ.