ಕೊಲೆಯನ್ನು ಆತ್ಮಹತ್ಯೆ ಎಂದ ಖಾಕಿ;ನೊಂದ ಮುಸ್ಲಿಂ ಕುಟುಂಬವೇ ಮತಾಂತರ 

Team Udayavani, Oct 3, 2018, 9:49 AM IST

ಭಾಗ್‌ಪತ್‌(ಉತ್ತರ ಪ್ರದೇಶ): ಮಗನ ಅಸ್ವಾಭಾವಿಕ ಸಾವನ್ನು ಆತ್ಮಹತ್ಯೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡ ಕಾರಣಕ್ಕೆ ತೀವ್ರವಾಗಿ ಮನನೊಂದ ಮುಸ್ಲಿಂ ಕುಟುಂಬವೊಂದು ಹಿಂದು ಧರ್ಮಕ್ಕೆ ಮತಾಂತರಗೊಂಡ ಘಟನೆ ನಡೆದಿದೆ. 

ಭದ್ರಾರ್ಕಾ ಎನ್ನುವ ಹಳ್ಳಿಯ ಅಖ್ತರ್‌ ಎನ್ನುವವರು ಕುಟುಂಬದ 12 ಮಂದಿಯೊಂದಿಗೆ ಹಿಂದೂ ಧರ್ಮ ಸ್ವೀಕರಿಸಿದ್ದಾರೆ. ಮಾತ್ರವಲ್ಲದೆ ಧರ್ಮವನ್ನು ಬದಲಿಸಬೇಕು ಎಂದು ಸಬ್‌ ಡಿವಿಷನಲ್‌ ಮ್ಯಾಜಿಸ್ಟ್ರೇಟ್‌ಗೆ ಅಫಿದವಿತ್‌ ಸಲ್ಲಿಸಿದ್ದಾರೆ.   

ನಾವು ಧರ್ಮವನ್ನು ಬದಲಾಯಿಸುವುದರಿಂದ ಪೊಲೀಸರು ನಿಷ್ಪಕ್ಷಪಾತ  ತನಿಖೆ ನಡೆಸಬಹುದು ಎಂದು ಅಖ್ತರ್‌ ಮಾಧ್ಯಮಗಳೆದುರು ಆಕ್ರೋಶ ಹೊರ ಹಾಕಿದ್ದಾರೆ. 

‘ನನ್ನ  ಪುತ್ರ ಗುಲ್‌ಹಸನ್‌ ಅವರು ಕೊಲೆಯಾಗಿದ್ದು, ಪೊಲೀಸರು ಆತ್ಮಹತ್ಯೆ ಎಂದು ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ’ ಎನ್ನುವುದು ಅಖ್ತರ್‌ ಅವರ ಆರೋಪವಾಗಿದ್ದು, ಮತಾಂತರವಾಗುವ ನ್ಯಾಯ ಪಡೆಯುವ ವಿಶ್ವಾಸ ಅವರದ್ದು. 

ಮುಸ್ಲಿಂ ಕುಟುಂಬ ಕೇಸರಿ ಪಟ್ಟಿಗಳನ್ನು ಹಣೆಗೆ ಕಟ್ಟಿಕೊಂಡು ಜೈ ಶ್ರೀರಾಮ್‌ ಎಂಬ ಘೋಷಣೆಗಳನ್ನು ಕೂಗುತ್ತಾ   ಹಿಂದು ಧರ್ಮ ಸ್ವೀಕರಿಸಿದ್ದು ,ಅವರನ್ನು ಹಿಂದೂ ಪರ ಸಂಘಟನೆಯ ಸದಸ್ಯರು ತಿಲಕವಿಟ್ಟು ಬರಮಾಡಿಕೊಂಡಿದ್ದಾರೆ.ಬಳಿಕ ಹವನ ಮಾಡಿಸಿ ಮತ್ತು ಹನುಮಾನ್‌ ಚಾಲೀಸಾವನ್ನು ಪಠಿಸಲಾಗಿದೆ. 

ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿರುವುದು ಹೊಸ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ