ಸುದ್ದಿವಾಹಿನಿ ಆ್ಯಂಕರ್ ಬಂಧನ; 2 ರಾಜ್ಯಗಳ ಪೊಲೀಸರ ವಾಗ್ವಾದ
Team Udayavani, Jul 6, 2022, 6:40 AM IST
ಗಾಜಿಯಾಬಾದ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿದ ಹಿನ್ನೆಲೆ ಸುದ್ದಿ ವಾಹಿನಿಯೊಂದರ ನಿರೂಪಕರನ್ನು ಮಂಗಳ ವಾರ ಬಂಧಿಸ ಲಾಗಿದೆ. ಬಂಧನದ ವೇಳೆ ಎರಡು ರಾಜ್ಯಗಳ ಪೊಲೀಸರ ನಡುವೆ ಸಾಕಷ್ಟು ಗೊಂದಲ ಉಂಟಾಗಿದ್ದವು.
ನಿರೂಪಕ ರೋಹಿತ್ ರಂಜನ್ ಅವರನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ನ ಮನೆಯಿಂದ ಬಂಧಿಸಲು ಕಾಂಗ್ರೆಸ್ ಆಡಳಿತದ ರಾಜ್ಯವಾದ ಛತ್ತೀಸ್‌ಗಡದ ಪೊಲೀಸರು ಬಂದಿದ್ದಾರೆ. ಬೆಳಗ್ಗೆ 5.30ರ ಹೊತ್ತಿಗೆ ಪೊಲೀ ಸರು ಬಂದಿದ್ದು, ತಕ್ಷಣ ಈ ವಿಚಾರವನ್ನು ರಂಜನ್ ಸ್ಥಳೀಯ ಪೊಲೀ ಸರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳೀಯ ಪೊಲೀ ಸರೂ ಸ್ಥಳಕ್ಕೆ ಬಂದು, ಅವರೇ ರಂಜನ್‌ರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ಬೇರೊಂದು ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಈ ವಿಚಾರವಾಗಿ ರಂಜನ್ ಟ್ವೀಟ್ ಕೂಡ ಮಾಡಿದ್ದು, “ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆಯೇ ನನ್ನನ್ನು ಬಂಧಿಸುವ ಪ್ರಯತ್ನ ನಡೆದಿತ್ತು’ ಎಂದಿದ್ದಾರೆ. ಅದಕ್ಕೆ ಛತ್ತೀಸ್‌ಗಡ ಪೊಲೀ ಸರು ಪ್ರತಿಕ್ರಿಯಿಸಿದ್ದು, “ಮಾಹಿತಿ ನೀಡಬೇಕೆಂಬ ನಿಯಮವಿಲ್ಲ. ನೀವು ನಮಗೆ ಸ್ಪಂದಿಸಿಲ್ಲ’ ಎಂದು ದೂರಿದ್ದಾರೆ.
ಏನು ಈ ವಿವಾದ?: ರಾಹುಲ್ ಅವರ ವಯ ನಾಡು ಕಚೇರಿಯನ್ನು ಕಿಡಿಗೇಡಿ ಗಳು ಹಾಳು ಗೆಡವಿದ್ದಕ್ಕೆ ಪ್ರತಿಕ್ರಿಯಿಸಿದ್ದ ರಾಹುಲ್, “ಅವರು ಮಕ್ಕಳು, ಕ್ಷಮಿಸಿಬಿಡಿ’ ಎಂದಿದ್ದರು. ಈ ವಿಡಿಯೋ ಕ್ಲಿಪ್ ಅನ್ನು ರಂಜನ್ ಅವರು ತಮ್ಮ ಟಿವಿ ಕಾರ್ಯಕ್ರಮದಲ್ಲಿ ಬಿತ್ತರಿಸಿದ್ದು, ಇದು ಉದಯ್‌ಪುರ ಕನ್ಹಯ್ಯಲಾಲ್ ಹತ್ಯೆ ಪ್ರಕರಣಕ್ಕೆ ರಾಹುಲ್ ನೀಡಿದ ಪ್ರತಿಕ್ರಿಯೆ ಎಂದು ಸುಳ್ಳು ಮಾಹಿತಿ ಪ್ರಸಾರ ಮಾಡಿದ್ದರು. ಮಾರನೇ ದಿನ ಈ ವಿಚಾರ ತಪ್ಪಾಗಿದ್ದಾಗಿ ಹೇಳಿ, ಕ್ಷಮೆಯನ್ನೂ ಯಾಚಿಸಿದ್ದರು.