ಟೆರರ್ ಫಂಡಿಂಗ್ ಕೇಸ್; ಯಾಸಿನ್ ಮಲಿಕ್ ಸೇರಿ ಇತರರ ವಿರುದ್ಧ NIA ಆರೋಪ ಪಟ್ಟಿ ಸಲ್ಲಿಕೆ
Team Udayavani, Oct 4, 2019, 6:14 PM IST
ನವದೆಹಲಿ:2017ರ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಶುಕ್ರವಾರ ಜೆಕೆಎಲ್ ಎಫ್ (ಜಮ್ಮು-ಕಾಶ್ಮೀರ್ ಲಿಬರೇಷನ್ ಫ್ರಂಟ್)ನ ವರಿಷ್ಠ ಯಾಸಿನ್ ಮಲಿಕ್ ಹಾಗೂ ಇತರ ನಾಲ್ವರ ವಿರುದ್ಧ ದೆಹಲಿ ಕೋರ್ಟ್ ಗೆ ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಸಿದೆ.
ಪ್ರತ್ಯೇಕವಾದಿಗಳಾದ ಅಸಿಯಾ ಅಂದ್ರಾಬಿ, ಶಬ್ಬೀರ್ ಶಾ, ಮಸ್ರಾತ್ ಆಲಂ ಮತ್ತು ಜಮ್ಮುಕಾಶ್ಮೀರದ ಮಾಜಿ ಶಾಸಕ ರಶೀದ್ ವಿರುದ್ಧ ಆರೋಪ ಪಟ್ಟಿ ದಾಖಲಿಸಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಈ ಪ್ರತ್ಯೇಕತಾವಾದಿಗಳು ಹಣಕಾಸು ಪಡೆದಿರುವುದಾಗಿ ಆರೋಪಿಸಿ ಸಲ್ಲಿಸುತ್ತಿರುವ ಎರಡನೇ ಆರೋಪ ಪಟ್ಟಿ ಇದಾಗಿದೆ ಎಂದು ವರದಿ ತಿಳಿಸಿದೆ.
ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ಹಫೀಜ್ ಸಹೀದ್ ಹಾಗೂ ಪಾಕಿಸ್ತಾನದ ಸೂಚನೆ ಮೇರೆಗೆ ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಮತ್ತು ಭಯೋತ್ಪಾದಕ ಚಟುವಟಿಕೆ ನಡೆಸಲು ಕುಮ್ಮಕ್ಕು ನೀಡಿರುವುದಾಗಿಯೂ ಆರೋಪಿಸಿರುವುದಾಗಿ ವರದಿ ವಿವರಿಸಿದೆ.
ಹಫೀಜ್ ಸಯೀದ್ ಹಾಗೂ ಸೈಯದ್ ಸಲಾಹುದ್ದೀನ್ ಜತೆ ಸಂಪರ್ಕ ಹೊಂದಿರುವ ಬಗ್ಗೆ ಸಾಮಾಜಿಕ ಜಾಲತಾಣದ ಸಾಕ್ಷ್ಯ, ಮೊಬೈಲ್ ಕರೆ ದಾಖಲೆ, ಮೌಖಿಕ ಹಾಗೂ ಇನ್ನಿತರ ಪುರಾವೆಗಳ ಆಧಾರದಲ್ಲಿ ಜಾರ್ಜ್ ಶೀಟ್ ಹಾಕಲಾಗಿದೆ ಎಂದು ಎಎನ್ ಐ ವರದಿ ಮಾಡಿದೆ.