ಇಂದಿನಿಂದ ನಿತೀಶ್ 4.0 : ಸಂಜೆ ಪ್ರಮಾಣ , ತಾರ್ ಕಿಶೋರ್, ರೇಣುದೇವಿ ಡಿಸಿಎಂ?
Team Udayavani, Nov 16, 2020, 6:28 AM IST
ಪಟ್ನಾ: ಸತತ ನಾಲ್ಕನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಜೆಡಿಯು ನಾಯಕ ನಿತೀಶ್ ಕುಮಾರ್ ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರವಿವಾರ ಅವರು ರಾಜ್ಯಪಾಲ ಫಗು ಚೌಹಾಣ್ ಅವರನ್ನು ಭೇಟಿಯಾಗಿ ಸರಕಾರ ರಚನೆಯ ಹಕ್ಕು ಮಂಡಿಸಿದ್ದಾರೆ. ನಾಲ್ಕನೇ ಆವೃತ್ತಿಯ ಬಿಜೆಪಿ- ಜೆಡಿಯು ಸರಕಾರದಲ್ಲಿ ಹಾಲಿ ಉಪ ಮುಖ್ಯ ಮಂತ್ರಿ ಸುಶೀಲ್ ಮೋದಿ ಇರುವುದಿಲ್ಲ. ಅವರ ಸ್ಥಾನದಲ್ಲಿ ತಾರ್ ಕಿಶೋರ್ ಪ್ರಸಾದ್ ಮತ್ತು ರೇಣು ದೇವಿ ಅವರನ್ನು ನೇಮಿಸುವುದು ಬಹುತೇಕ ಖಚಿತವಾಗಿದೆ.
ರವಿವಾರ ಪಟ್ನಾದಲ್ಲಿ ಬಿಜೆಪಿ-ಜೆಡಿಯು ಶಾಸಕರು ಸಭೆ ಸೇರಿದ್ದರು. ಈ ಸಂದರ್ಭದಲ್ಲಿ ಎನ್‌ಡಿಎ ನಾಯಕರಾಗಿ ನಿತೀಶ್ ಕುಮಾರ್ ಅವರನ್ನೇ ಆಯ್ಕೆ ಮಾಡಲಾಯಿತು. ಮೈತ್ರಿಕೂಟ 125 ಸ್ಥಾನಗಳನ್ನು ಗೆದ್ದು ಅಧಿಕಾರ ಉಳಿಸಿಕೊಂಡಿದೆ.
ಉತ್ತರಿಸದ ನಿತೀಶ್
ನಿತೀಶ್ 4.0ರಲ್ಲಿ ಹಾಲಿ ಡಿಸಿಎಂ ಸುಶೀಲ್ ಮೋದಿ ಮುಂದುವರಿಯುವುದು ಅಸಂಭವ ಎಂಬ ವರದಿಗಳ ಬಗ್ಗೆ ಸಿಎಂ ನಿತೀಶ್ ಸ್ಪಷ್ಟ ಉತ್ತರ ನೀಡಿಲ್ಲ. ರಾಜ್ಯಪಾಲರಿಗೆ ಎನ್‌ಡಿಎ ಮೈತ್ರಿಕೂಟದ ಪಕ್ಷಗಳು ನೀಡಿದ ಬೆಂಬಲ ಪತ್ರವನ್ನು ಹಸ್ತಾಂತರಿಸಿದ್ದೇನೆ. ಅದಕ್ಕೆ ಅನುಸಾರವಾಗಿ ಸರಕಾರ ರಚಿಸಲು ಆಹ್ವಾನ ನೀಡಿದ್ದಾರೆ. ಸೋಮವಾರ ಸಂಜೆ 4 ಗಂಟೆಗೆ ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ ಎಂದಷ್ಟೇ ನುಡಿದು ಕಾರನ್ನೇರಿದರು.
ಇಬ್ಬರು ಡಿಸಿಎಂಗಳು
ಬಿಹಾರ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಶಾಸಕ ತಾರ್‌ಕಿಶೋರ್ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ. ಉಪ ನಾಯಕರನ್ನಾಗಿ ಬೇಟಿಯಾ ಕ್ಷೇತ್ರದ ಶಾಸಕ ರೇಣು ದೇವಿ ಅವರನ್ನು ಆಯ್ಕೆ ಮಾಡಲಾಗಿದೆ. ಹೀಗಾಗಿ ನಿತೀಶ್ ಸರಕಾರದಲ್ಲಿ ಇಬ್ಬರು ಡಿಸಿಎಂಗಳು ನೇಮಕವಾಗಲಿದ್ದಾರೆ. ಈ ಇಬ್ಬರು ನಾಯಕರು ಸೋಮವಾರ ನಿತೀಶ್ ಜತೆಗೆ ಪ್ರಮಾಣ ಸ್ವೀಕರಿಸಲಿದ್ದಾರೆ.