ಸಭೆಗೆ ಪ್ರಮುಖರೇ ಗೈರು ; ಸಿಎಎ ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳದ ಟಿಎಂಸಿ, ಆಪ್‌, ಬಿಎಸ್‌ಪಿ

Team Udayavani, Jan 14, 2020, 6:28 AM IST

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಕ್ಯಾಂಪಸ್‌ಗಳಲ್ಲಿ ಹಿಂಸಾಚಾರ ಕುರಿತು ಚರ್ಚಿಸಲು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸೋಮವಾರ ದಿಲ್ಲಿ ಯಲ್ಲಿ ನಡೆದ ವಿಪಕ್ಷಗಳ ಸಭೆಗೆ ಪ್ರಮುಖ ವಿಪಕ್ಷಗಳೇ ಗೈರಾಗಿದ್ದು, ಕಾಂಗ್ರೆಸ್‌ಗೆ ಮುಜುಗರ ಉಂಟುಮಾಡಿದೆ.

ಬಿಎಸ್‌ಪಿ, ಆಮ್‌ ಆದ್ಮಿ ಪಾರ್ಟಿ, ತೃಣಮೂಲ ಕಾಂಗ್ರೆಸ್‌, ಎಸ್‌ಪಿ, ಡಿಎಂಕೆ, ಶಿವಸೇನೆ ಸೇರಿದಂತೆ ಪ್ರಮುಖ ಪಕ್ಷಗಳ ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳ ಲಿಲ್ಲ. ಎನ್‌ಸಿಪಿ, ಸಿಪಿಐ, ಸಿಪಿಎಂ, ಜೆಎಂಎಂ, ಎಲ್‌ಜೆಡಿ, ಆರ್‌ಎಲ್‌ಎಸ್‌ಪಿ, ಆರ್‌ಜೆಡಿ, ಎನ್‌ಸಿ ಸೇರಿ 20 ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ನಿರ್ಣಯ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸರಕಾರ ವಾಪಸ್‌ ಪಡೆಯಬೇಕು ಮತ್ತು ಎನ್‌ಪಿಆರ್‌(ರಾಷ್ಟ್ರೀಯ ಜನಸಂಖ್ಯೆ ನೋಂದಣಿ) ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು. ಏಕೆಂದರೆ, ಇದು ಬಡ ಜನರು, ಎಸ್‌ಸಿ-ಎಸ್‌ಟಿಗಳು ಹಾಗೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡ ‘ಅಸಾಂವಿಧಾನಿಕ ಪ್ಯಾಕೇಜ್‌’ ಆಗಿದೆ ಎಂದು ಸಭೆ ಅಭಿಪ್ರಾಯಪಟ್ಟಿದೆ. ಎನ್‌ಪಿಆರ್‌ ಎನ್ನುವುದು ಎನ್‌ಆರ್‌ಸಿ (ರಾಷ್ಟ್ರೀಯ ಪೌರತ್ವ ನೋಂದಣಿ)ಯ ಅಡಿಪಾಯವಾಗಿದೆ. ಯಾವ ರಾಜ್ಯಗಳ ಸಿಎಂಗಳು ಎನ್‌ಆರ್‌ಸಿ ಜಾರಿ ಮಾಡುವುದಿಲ್ಲ ಎಂದು ಘೋಷಿಸಿದ್ದಾರೋ, ಅವರೆಲ್ಲರೂ ಎನ್‌ಪಿಆರ್‌ ಪ್ರಕ್ರಿಯೆಯನ್ನೂ ತಡೆಯಬೇಕಾಗಿದೆ ಎಂಬ ನಿರ್ಣಯವನ್ನೂ ಕೈಗೊಳ್ಳಲಾಯಿತು.

ಮೋದಿ, ಶಾ ವಿರುದ್ಧ ಕಿಡಿ: ಸಭೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸಿದ ಸೋನಿಯಾಗಾಂಧಿ, “ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಎನ್‌ಆರ್‌ಸಿ-ಸಿಎಎ ಬಗ್ಗೆ ಜನರ ಹಾದಿ ತಪ್ಪಿಸುತ್ತಿದ್ದಾರೆ. ತಾವೇ ನೀಡಿದ ಹೇಳಿಕೆಗಳಿಗೆ ತದ್ವಿರುದ್ಧವಾಗಿ ಮಾತನಾಡುತ್ತಾರೆ. ಸಮರ್ಪಕ ಆಡಳಿತ ನೀಡುವಲ್ಲಿ, ಜನರಿಗೆ ಭದ್ರತೆ ಒದಗಿಸುವಲ್ಲಿ ಸರಕಾರ ವಿಫ‌ಲವಾಗಿರುವುದು ಸ್ಪಷ್ಟವಾಗಿದೆ. ವಿಪಕ್ಷಗಳೆಲ್ಲ ಒಂದಾಗಿ ಸರಕಾರದ ಕುತಂತ್ರಗಳನ್ನು ಬಯಲಿಗೆಳೆಯಬೇಕು’ ಎಂದಿದ್ದಾರೆ.

ಸಿಎಎ ಪರ ಜಾಥಾ: ಈ ನಡುವೆ, ಪಾಕಿಸ್ಥಾನದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬಂದಿರುವ ಸುಮಾರು 5 ಸಾವಿರ ಭೋವಿ ಹಿಂದೂ ಸಮುದಾಯ ದಿಲ್ಲಿಯಲ್ಲಿ ಜ. 18ರಂದು ಸಿಎಎ ಪರ ಬೃಹತ್‌ ರ್ಯಾಲಿ ಹಮ್ಮಿಕೊಂಡಿದೆ.

ಜಾಮಿಯಾ ವಿಸಿಗೆ ಮುತ್ತಿಗೆ: ಡಿ.15ರ ಹಿಂಸಾಚಾರಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರ ವಿರುದ್ಧ ಎಫ್ಐಆರ್‌ ದಾಖಲಿಸುವಂತೆ ಆಗ್ರಹಿಸಿ ಜಾಮಿಯಾ ಮಿಲಿಯಾ ಇಸ್ಲಾ ಮಿಯಾ ಕುಲಪತಿ ನಜ್ಮಾ ಅಖ್ತರ್‌ ಕಚೇರಿಗೆ ವಿದ್ಯಾರ್ಥಿಗಳು ಸೋಮವಾರ ಮುತ್ತಿಗೆ ಹಾಕಿ, ಪ್ರತಿಭಟಿಸಿದ್ದಾರೆ. ಕೊನೆಗೆ, ಎಫ್ಐಆರ್‌ ದಾಖಲಿಸುವ ಕುರಿತು ಪರಿಶೀಲನೆ ನಡೆಸುತ್ತೇವೆ ಎಂದು ನಜ್ಮಾ ಭರವಸೆ ನೀಡಿದ್ದಾರೆ.

ನಾಯಕರ ಹಗುರ ಮಾತುಗಳು: ಉತ್ತರಪ್ರದೇಶದ ಅಲಿಗಡದಲ್ಲಿ ಸಿಎಎ ಪರ ನಡೆದ ರ್ಯಾಲಿ ವೇಳೆ ಬಿಜೆಪಿ ನಾಯಕ ರಘುರಾಜ್‌ ಸಿಂಗ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ಪ್ರಧಾನಿ ಮೋದಿ ಹಾಗೂ ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ವಿರುದ್ಧ ಘೋಷಣೆ ಕೂಗುವವರನ್ನು ಜೀವಂತವಾಗಿ ಹೂತು ಹಾಕುತ್ತೇವೆ’ ಎಂದು ಸಿಂಗ್‌ ಹೇಳಿರುವುದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನೊಂದೆಡೆ, ಪಶ್ಚಿಮ ಬಂಗಾಲ ಬಿಜೆಪಿ ಅಧ್ಯಕ್ಷ ದಿಲೀಪ್‌ ಘೋಷ್‌ ಕೂಡ ಇಂಥದ್ದೇ ಹೇಳಿಕೆಯ ಮೂಲಕ ವಿವಾದ ಸೃಷ್ಟಿಸಿದ್ದಾರೆ. “ಸಿಎಎ ವಿರುದ್ಧ ಪ್ರತಿಭಟನೆ ನಡೆಸುವವರನ್ನು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಾಯಿಗಳಿಗೆ ಗುಂಡಿಕ್ಕಿದಂತೆ ಗುಂಡಿಕ್ಕಲಾಗುತ್ತದೆ’ ಎಂದಿದ್ದಾರೆ. ಈ ಹೇಳಿಕೆಗೆ ಸ್ವತಃ ಬಿಜೆಪಿ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎನ್‌ಆರ್‌ಸಿ ಅನಗತ್ಯ ಎಂದ ನಿತೀಶ್‌: ಎನ್‌ಆರ್‌ಸಿಯನ್ನು ದೇಶಾದ್ಯಂತ ಜಾರಿ ಮಾಡುವುದು ಅನಗತ್ಯ ಹಾಗೂ ಅಸಮರ್ಥನೀಯ ಎಂದು ಬಿಹಾರ ಸಿಎಂ ನಿತೀಶ್‌ ಕುಮಾರ್‌ ಹೇಳಿದ್ದಾರೆ. ರಾಜ್ಯ ಅಸೆಂಬ್ಲಿಯಲ್ಲೇ ಅವರು ಈ ಮಾತುಗಳನ್ನಾಡಿದ್ದು, ಎನ್‌ಆರ್‌ಸಿ ಎನ್ನುವುದು ಅಸ್ಸಾಂಗೆ ಮಾತ್ರ ಸೀಮಿತ. ಅದನ್ನು ದೇಶಾದ್ಯಂತ ಅನುಷ್ಠಾನ ಮಾಡುವ ಅಗತ್ಯವೇ ಇಲ್ಲ ಎಂದಿದ್ದಾರೆ.

ಬಿಜೆಪಿ ನಾಯಕನ ಮೇಲೆ ಹಲ್ಲೆ
ಕೇರಳ ಬಿಜೆಪಿ ಘಟಕದ ಕಾರ್ಯದರ್ಶಿ ಎ.ಕೆ.ನಜೀರ್‌ ಅವರ ಮೇಲೆ ಮಸೀದಿಯೊಳಗೇ ಪ್ರವೇಶಿಸಿ ಹಲ್ಲೆ ನಡೆಸಲಾಗಿದೆ. ಅವರು ಸಿಎಎ ಪರ ರ್ಯಾಲಿಯಲ್ಲಿ ಪಾಲ್ಗೊಂಡು ವಾಪಸಾದ ಸ್ವಲ್ಪ ಹೊತ್ತಲ್ಲೇ ಇಡುಕ್ಕಿ ಜಿಲ್ಲೆ ಯಲ್ಲಿ ಈ ಘಟನೆ ನಡೆದಿದೆ. ಇದು ಎಸ್‌ಡಿಪಿಐ ಹಾಗೂ ಡಿವೈಎಫ್ಐ ಕಾರ್ಯಕರ್ತರ ಕೃತ್ಯ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಮಸೀದಿಯೊಳಗೆ ದಾಳಿ ನಡೆದಿರುವ ಕಾರಣ ಘಟನೆಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಪೌರತ್ವ ಕಾಯ್ದೆ ವಿರುದ್ಧ ವಿಪಕ್ಷಗಳ ನಿರ್ಣಯವು ಪಾಕಿಸ್ಥಾನಕ್ಕೆ ಖುಷಿ ತಂದಿರಬಹುದು. ವಾಸ್ತವದಲ್ಲಿ ಈ ಕಾನೂನು ಪಾಕಿಸ್ಥಾನ ತನ್ನ ದೇಶದಲ್ಲಿನ ಅಲ್ಪಸಂಖ್ಯಾತರನ್ನು ಹೇಗೆ ಕ್ರೂರವಾಗಿ ನಡೆಸಿಕೊಳ್ಳುತ್ತಿದೆ ಎಂಬುದನ್ನು ಬಯಲು ಮಾಡುವಂಥದ್ದು.
— ರವಿಶಂಕರ್‌ ಪ್ರಸಾದ್‌, ಕೇಂದ್ರ ಸಚಿವ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ