ಅವಿಶ್ರಾಂತ ! ಮೋದಿಯ ವಿಶೇಷವೇ ಅದು

Team Udayavani, May 24, 2019, 6:05 AM IST

ಮಣಿಪಾಲ: ಚುನಾವಣೆ ಘೋಷಣೆಯಾದ ಮರುದಿನದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನವೂ ವಿಶ್ರಾಂತಿ ಪಡೆಯಲಿಲ್ಲ.

ಚುನಾವಣೆ ಘೋಷಣೆಯಾಗುವುದಕ್ಕೆ ಮೊದಲು ಹಲವೆಡೆ ಪ್ರಚಾರ ಸಭೆ ನಡೆಸಿದ್ದರು. ಒಟ್ಟು 51 ದಿನಗಳ ಕಾಲ ನಡೆದ ಪ್ರಚಾರ ಸಭೆಗಳಲ್ಲಿ 142 ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಗಮನಾರ್ಹ ಎಂದರೆ ಇವುಗಳಲ್ಲಿ ಮೂರನೇ ಒಂದರಷ್ಟು ರ್ಯಾಲಿಗಳು ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಲದಲ್ಲಿ ಆಯೋಜಿಸಲಾಗಿತ್ತು.

ಉತ್ತರ ಪ್ರದೇಶದಲ್ಲಿ 29 ರ್ಯಾಲಿ
80 ಲೋಕಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಕಳೆದ ಬಾರಿ ಬಿಜೆಪಿ ಅಮೋಘ ಪ್ರದರ್ಶನ ನೀಡಿತ್ತು. ಆದರೂ ಈ ಬಾರಿ ಬರೋಬ್ಬರಿ 29 ರ್ಯಾಲಿಗಳನ್ನು ಸಂಘಟಿಸಲಾಗಿತ್ತು. ಇನ್ನು 42 ಕ್ಷೇತ್ರಗಳಿರುವ ಪಶ್ಚಿಮ ಬಂಗಾಲದಲ್ಲಿ 17 ರ್ಯಾಲಿಗಳನ್ನು ಪಕ್ಷ ಆಯೋಜಿಸಿದ್ದು, ಬಂಗಾಲದಲ್ಲಿ ಟಿಎಂಸಿಗೆ ಸಡ್ಡು ಹೊಡೆಯಲು ಮೋದಿ ಉದ್ದೇಶಿಸಿದ್ದರು.

ಅಧಿಕಾರ ಕಳೆದುಕೊಂಡ ಕಡೆ ಹೆಚ್ಚು ಶ್ರಮ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಹೆಚ್ಚು ಶ್ರಮ ಹಾಕಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಎರಡು ರಾಜ್ಯಗಳು ಕಮಲದ ಕೈ ಬಲಪಡಿಸಿದ್ದವು. ಮಧ್ಯಪ್ರದೇಶ 29 ಮತ್ತು ರಾಜಸ್ಥಾನ 25 ಲೋಕಸಭಾ ಕ್ಷೇತ್ರಗಳನ್ನು ಹೊಂದಿವೆ. ಇಲ್ಲಿ ಮೋದಿ ಅವರು 8-9 ರ್ಯಾಲಿಗಳನ್ನು ಮಾಡಿದ್ದರು.

ದಿನ ಒಂದು ರ್ಯಾಲಿ ಮೂರು
ಮೋದಿ ದಿನದಲ್ಲಿ 3ರಿಂದ 4 ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಉತ್ತರ ಭಾರತ ದಲ್ಲಿ ಒಂದು ರ್ಯಾಲಿ ಬೆಳಗ್ಗೆ ನಡೆಸಿ ಉಳಿದೆರಡು ರ್ಯಾಲಿಗಳನ್ನು ದಕ್ಷಿಣ ಭಾರತದಲ್ಲಿ ನಡೆಸಿದ ಉದಾಹರಣೆಗಳಿವೆ. ಬಿಜೆಪಿ ಅಧಿಕಾರದಲ್ಲಿ ಇರದ ರಾಜ್ಯಗಳು ಮತ್ತು ಬಿಜೆಪಿ ಖಾತೆ ತೆರೆಯದ ಕ್ಷೇತ್ರಗಳತ್ತ ಹೆಚ್ಚು ಗಮನ ಹರಿಸಿದ್ದರು.

ವಾರಾಣಸಿಯಲ್ಲಿ ರ್ಯಾಲಿಯೇ ಇಲ್ಲ
ವಾರಾಣಸಿಯಲ್ಲಿ ಮೋದಿ ಒಂದೂ ಪ್ರಚಾರ ಸಭೆ ನಡೆಸಲಿಲ್ಲ. ನಾಮಪತ್ರ ಸಲ್ಲಿಕೆ ಮೊದಲ ದಿನ ನಡೆಸಿದ ರೋಡ್‌ಶೋ ಮಾತ್ರ ಅಭೂತಪೂರ್ವವಾಗಿತ್ತು. 5 ಲಕ್ಷಕ್ಕೂ ಮಿಕ್ಕಿ ಜನ ಅದರಲ್ಲಿ ಭಾಗಿಯಾಗಿದ್ದು, ಮೋದಿ ಜನಪ್ರಿಯತೆಗೆ ಸಾಕ್ಷ್ಯ ನೀಡಿತ್ತು.

-  ಈಶ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ