ಜನರ ಹಣ ಖಬರ್‌ಸ್ಥಾನಕ್ಕೆ ಬಳಕೆ ಮಾಡಿದ್ದ ಸರಕಾರಗಳು
Team Udayavani, Nov 5, 2021, 6:30 AM IST
ಅಯೋಧ್ಯೆ: ಉತ್ತರ ಪ್ರದೇಶದಲ್ಲಿ ಬಿಜೆಪಿ ಸರಕಾರಕ್ಕೆ ಬರುವ ಮೊದಲು ಇದ್ದ ಸರಕಾರಗಳು ಜನರ ತೆರಿಗೆ ಹಣವನ್ನು ಖಬರ್‌ಸ್ಥಾನಕ್ಕೆ ಬಳಕೆ ಮಾಡುತ್ತಿದ್ದವು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋ ಪಿಸಿದ್ದಾರೆ.
ಅಯೋಧ್ಯೆಯಲ್ಲಿ ಆಯೋಜಿಸಲಾಗಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2017ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಗುಲಗಳ ಮರು ಅಭಿವೃದ್ಧಿಗೆ ಈ ಹಣವನ್ನು ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಮುಂದಿನ ವರ್ಷದ ಹೋಳಿ ಹಬ್ಬದವರೆಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಅನ್ವಯ ಫಲಾನುಭವಿಗಳಿಗೆ ಆಹಾರ ನೀಡುವುದನ್ನು ಮುಂದುವರಿಸಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಪ್ರಕಟಿಸಿದ್ದಾರೆ.
ಬಳಿಕ ಅವರು 661 ಕೋಟಿ ರೂ. ಮೌಲ್ಯದ 50 ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಕೂಡ ಚಾಲನೆ ನೀಡಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಕೇಂದ್ರ ಸರಕಾರದಿಂದಲೂ ವಿವಿಧ ರೀತಿಯ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಅದರ ಮೂಲಕ ರಾಜ್ಯದಲ್ಲಿ 500 ದೇಗುಲಗಳು ಮತ್ತು ಇತರ ಧಾರ್ಮಿಕ ಕ್ಷೇತ್ರಗಳು ಪುನರುಜ್ಜೀವನಗೊಳ್ಳುತ್ತಿವೆ ಎಂದು ಪ್ರಕಟಿಸಿದರು. ರಾಮ ಮಂದಿರ ನಿರ್ಮಾಣಕ್ಕೆ ಮೊದಲ ಮೂವತ್ತು ವರ್ಷಗಳಲ್ಲಿ ಜೈ ಶ್ರೀ ರಾಮ್ ಎನ್ನುವುದೂ ಅಪರಾಧವಾಗಿತ್ತು ಎಂದರು.