ಗುಂಡಿಗೂ ಆಧಾರ್ ಕಡ್ಡಾಯ
Team Udayavani, Sep 22, 2017, 11:55 AM IST
ಹೈದರಾಬಾದ್: ಬ್ಯಾಂಕ್ ಖಾತೆ, ಮೊಬೈಲ್, ಪ್ಯಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಬೇಕೆನ್ನುವುದು ಕೇಂದ್ರದ ನಿಯಮ. ಆದರೆ, ಇನ್ನು ಪಬ್‌ಗಳಲ್ಲಿ ಗುಂಡು ಹಾಕಬೇಕಾದರೆ ಕೂಡ ಆಧಾರ್ ಕಾರ್ಡ್ ಕಡ್ಡಾಯ. ಇದು ಕೇಂದ್ರ ಸರಕಾರದ ನಿರ್ಧಾರವಲ್ಲ. ತೆಲಂಗಾಣದ ಕೆ.ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರ ಸಮಿತಿ ಸರಕಾರ ಈ ನಿರ್ಧಾರ ಕೈಗೊಂಡಿದೆ. ರಾಜಧಾನಿ ಹೈದರಾಬಾದ್‌ನಲ್ಲಿ ಪಬ್ ಪ್ರವೇಶಕ್ಕೆ ಆಧಾರ್ ಕಡ್ಡಾಯವೆಂದು ಅಲ್ಲಿನ ಅಬಕಾರಿ ಮತ್ತು ಪಾನ ನಿಷೇಧ ಇಲಾಖೆ ಆದೇಶ ಹೊರಡಿಸಿದೆ.
ಇತ್ತೀಚೆಗೆ ಖಾಸಗಿ ಶಾಲೆಯ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣದ ತನಿಖೆ ವೇಳೆ ಆಕೆ ಮತ್ತು ಇತರರು ನಿಯಮಿತವಾಗಿ ಪಬ್‌ಗ ಹೋಗುತ್ತಿದ್ದುದು ಬೆಳಕಿಗೆ ಬಂದಿದೆ. ಹೀಗಾಗಿ, ಅಪ್ರಾಪ್ತ ವಯಸ್ಸಿನವರು ಪಬ್‌ಗೆ ಪ್ರವೇಶಿಸದಂತೆ ಮಾಡಲು ಇಂಥ ನಿರ್ಣಯ ಕೈಗೊಳ್ಳಲಾಗಿದೆ. ಈ ಮೂಲಕ ಅವರು ಮದ್ಯಪಾನ ಮಾಡಿ ವಾಹನ ಚಲಾಯಿಸಿ ಉಂಟಾಗಬಹುದಾದ ದುರಂತಗಳ ಸಂಖ್ಯೆ ತಡೆಯುವ ಪ್ರಯತ್ನಕ್ಕೂ ತೆಲಂಗಾಣ ಸರಕಾರ ಮುಂದಾಗಿದೆ. ಇಷ್ಟು ಮಾತ್ರವಲ್ಲದೆ ಪಬ್ ಮತ್ತು ಬಾರ್ ಮಾಲೀಕರು ತಮ್ಮ ಖಾಯಂ ಗ್ರಾಹಕರ ರಿಜಿಸ್ಟರ್ ಅನ್ನು ಕಾಯ್ದುಕೊಳ್ಳಲೂ ಕಟ್ಟಪ್ಪಣೆ ಮಾಡಲಾಗಿದೆ. ಮಾದಕ ವಸ್ತು ಕಳ್ಳಸಾಗಣೆದಾರರ ಮೇಲೆ ನಿಯಂತ್ರಣ ಹೇರಲೂ ಇದು ನೆರವಾಗಲಿದೆ ಎನ್ನುವುದು ತೆಲಂಗಾಣ ಸರಕಾರದ ವಿಶ್ವಾಸ.