34ಕ್ಕೇರಿದ ಫೋನಿ ಮರಣ ಮೃದಂಗ
Team Udayavani, May 6, 2019, 6:00 AM IST
ಒಡಿಶಾದಲ್ಲಿ ಫೋನಿ ಅಬ್ಬರಕ್ಕೆ ಸಿಲುಕಿ ಧರೆಗುರುಳಿದ ಮನೆಗಳಲ್ಲಿ ಅಳಿದುಳಿದ ವಸ್ತುಗಳಿಗಾಗಿ ತಡಕಾಡುತ್ತಿರುವ ಸಂತ್ರಸ್ತರು.
ಭುವನೇಶ್ವರ:ಒಡಿಶಾದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿರುವ ಫೋನಿ ಚಂಡಮಾರುತಕ್ಕೆ ಆ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 34ಕ್ಕೇರಿದೆ.
ಚಂಡಮಾರುತ ಕಾಲಿಟ್ಟ ಮೊದಲ ದಿನವಾದ ಶುಕ್ರವಾರದ ಅಂತ್ಯಕ್ಕೆ ಕೇವಲ 3 ಸಾವು ಎಂದು ಹೇಳಲಾಗಿತ್ತು. ರವಿವಾರದ ಹೊತ್ತಿಗೆ ಆ ಸಂಖ್ಯೆ 12ಕ್ಕೇರಿತ್ತು. ಸೋಮ ವಾರವೂ ಮತ್ತಷ್ಟು ಮಾಹಿತಿ ಲಭ್ಯವಾಗಿದ್ದು, ಸಾವಿನ ಸಂಖ್ಯೆ 34ಕ್ಕೇರಿದೆ ಎಂದು ರಾಜ್ಯ ಸರಕಾರದ ಕಾರ್ಯದರ್ಶಿ ಎ.ಪಿ. ಪಾಧಿ ಹೇಳಿದ್ದಾರೆ. ಮೃತರಲ್ಲಿ 21 ಮಂದಿ ಪುರಿ ಜಿಲ್ಲೆಗೆ ಸೇರಿದವರಾಗಿದ್ದಾರೆ.
ಸೋಮವಾರ, ಪ್ರಧಾನಿ ಮೋದಿ ಚಂಡಮಾರುತ ಹಾವಳಿಗೆ ತುತ್ತಾದ ಪ್ರದೇಶಗಳಿಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ನೆರವು ಘೋಷಿಸಿದ ಸಿಎಂ: ಪುರಿ, ಭುವನೇಶ್ವರ ಸೇರಿ ಎಲ್ಲೆಡೆ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಕುಡಿಯುವ ನೀರು, ರಸ್ತೆ, ದೂರವಾಣಿ ಮುಂತಾದ ಅಗತ್ಯ ಸೇವೆಗಳನ್ನು ತುರ್ತಾಗಿ ಪುನರುತ್ಥಾನಗೊಳಿಸಲಾಗುತ್ತಿದೆ. ಇದರ ನಡುವೆಯೇ ರವಿವಾರಮುಖ್ಯಮಂತ್ರಿ ನವೀನ್ ಪಟ್ನಾಯಕ್, ಸಂತ್ರಸ್ತರಿಗೆ ನೆರವು ಪ್ರಕಟಿಸಿದ್ದಾರೆ. ಚಂಡಮಾರುತದ ಪ್ರಭಾವಕ್ಕೆ ತುತ್ತಾಗಿರುವ ಪ್ರದೇಶಗಳನ್ನು ಅತಿ ಭೀಕರ, ಭೀಕರ ಹಾಗೂ ಗಂಭೀರವಾಗಿ ಹಾನಿಗೀಡಾಗಿರುವ ಪ್ರದೇಶಗಳೆಂದು ವಿಂಗಡಿಸಲಾಗಿದೆ. ಪುರಿ ಮತ್ತು ಖುರ್ದಾದ ಕೆಲ ಭಾಗಗಳಲ್ಲಿ (ಅತಿ ಭೀಕರ ಪರಿಣಾಮ) ಆಹಾರ ಸುರಕ್ಷಾ ಕಾಯ್ದೆಯ (ಎಫ್ಎಸ್‌ಎ) ವ್ಯಾಪ್ತಿಗೆ ಒಳಪಟ್ಟಿರುವ ಕುಟುಂಬಗಳಿಗೆ ತಲಾ 50 ಕೆಜಿ ಅಕ್ಕಿ, 2 ಸಾವಿರ ರು. ನಗದು ಮತ್ತು ಪಾಲಿಥಿನ್ ಶೀಟ್‌ಗಳನ್ನು ನೀಡಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.
ಖುರ್ದಾದ ಇತರ ಪ್ರಾಂತ್ಯಗಳಲ್ಲಿನ (ಭೀಕರ ಪರಿಣಾಮ) ಎಫ್ಎಸ್‌ಎ ವ್ಯಾಪ್ತಿಗೊಳಪಡುವ ಕುಟುಂಬಗಳಿಗೆ ಒಂದು ತಿಂಗಳ ಅಕ್ಕಿ, 1 ಸಾವಿರ ರೂ. ನಗದು ಮತ್ತು ಪಾಲಿಥಿನ್ ಶೀಟುಗಳನ್ನು ನೀಡಲಾಗುತ್ತದೆ. ಇನ್ನು, ಕಟಕ್, ಕೇಂದ್ರಾಪರ, ಜಗತ್‌ಸಿಂಗ್ (ಗಂಭೀರ ಪರಿಣಾಮ)ಜಿಲ್ಲೆಗಳಲ್ಲಿನ ನಿರಾಶ್ರಿತ ಕುಟುಂಬಗಳಿಗೆ ತಿಂಗಳ ಕೋಟಾದ ಅಕ್ಕಿ ಮತ್ತು 500 ರೂ. ನೀಡಲಾ ಗುತ್ತದೆ ಎಂದು ತಿಳಿಸಿದ್ದಾರೆ.
ಸಿದ್ಧಗೊಳಿಸಿದ ಆಹಾರದ ಪೊಟ್ಟಣಗಳನ್ನು ಉಚಿತವಾಗಿ ಪೂರೈ ಸಲು ತೀರ್ಮಾನಿಸಲಾಗಿದೆ. ಜತೆಗೆ, ಚಂಡ ಮಾರುತ ಬಾಧಿತ ಎಲ್ಲಾ ಪ್ರದೇಶಗಳಿಗೆ ಕುಡಿ ಯುವ ನೀರಿನ ಸೌಕರ್ಯ ಪುನರುತ್ಥಾನ ಗೊಳಿಸುವ ಕಾಮಗಾರಿ ಭರದಿಂದ ಸಾಗಿದ್ದು, ರವಿವಾರಸಂಜೆ ವೇಳೆಗೆ, ಪುರಿಯ ಶೇ. 70 ರಷ್ಟು ಪ್ರಾಂತ್ಯಗಳಿಗೆ ಕುಡಿಯುವ ನೀರು ಲಭ್ಯ ವಾಗಲಿದೆ ಎಂದು ಪಟ್ನಾಯಕ್ ತಿಳಿಸಿದ್ದಾರೆ. ಇದೇ ವೇಳೆ ಪರಿಹಾರ ಕಾರ್ಯಕ್ಕಾಗಿ ಉ. ಪ್ರದೇಶ, ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಿಂದ ನೆರವಿನ ಮಹಾಪೂರ ಹರಿದು ಬಂದಿದೆ.
ದೂರವಾಣಿ ಸೇವೆಗೆ ಆದ್ಯತೆ
ಒಡಿಶಾದಲ್ಲಿ ಅಸ್ತವ್ಯಸ್ತಗೊಂಡಿರುವ ದೂರವಾಣಿ ಸಂಪರ್ಕ ವ್ಯವಸ್ಥೆಯನ್ನು ಪುನರ್ ಪ್ರತಿಷ್ಠಾಪಿಸಲು ನಿರ್ಧರಿಸಿರುವ ಪ್ರಮುಖ ದೂರವಾಣಿ ಸಂಸ್ಥೆಗಳಾದ ಭಾರ್ತಿ ಏರ್‌ಟೆಲ್, ವೊಡಾಫೋನ್, ಐಡಿಯಾ ಮತ್ತು ರಿಲಯನ್ಸ್ ಜಿಯೋ ಸಂಸ್ಥೆಗಳು ಆ ರಾಜ್ಯದಲ್ಲಿ 930 ಬೇಸ್ ಟ್ರಾನ್ಸೀವರ್ ಕೇಂದ್ರಗಳನ್ನು (ಬಿಟಿಎಸ್) ಸ್ಥಾಪಿಸಲು ತೀರ್ಮಾನಿಸಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದೇಶದಲ್ಲಿನ ಕೋಮು ಘರ್ಷಣೆಗಳ ಬಗ್ಗೆ ಪ್ರಧಾನಿ ಮೌನವೇಕೆ?: ಅಶೋಕ್ ಗೆಹ್ಲೋಟ್ ಪ್ರಶ್ನೆ
‘ದುಃಸ್ವಪ್ನ’ ಬಿದ್ದ ಮೇಲೆ ಕದ್ದ ದೇವಸ್ಥಾನದ 14 ವಿಗ್ರಹಗಳನ್ನು ಹಿಂದಿರುಗಿಸಿದ ಕಳ್ಳರು
ಅತಿಕ್ರಮಣ ವಿರೋಧಿ ಅಭಿಯಾನ : ಕೇಜ್ರಿವಾಲ್ ಆಕ್ರೋಶ
ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ ಪತ್ತೆ
ಭಾರೀ ಮಳೆಗೆ ಸಿಲುಕಿದ ರೈಲು; ಸಹಾಯಕ್ಕೆ ಧಾವಿಸಿದ ಭಾರತೀಯ ವಾಯುಪಡೆ!