ಏರ್ ಸೆಲ್ –ಮ್ಯಾಕ್ಸಿಸ್ ಪ್ರಕರಣ; ಕಾರ್ತಿ ಚಿದಂಬರಂಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು
Team Udayavani, Sep 5, 2019, 5:18 PM IST
ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಲಂಚ ಪ್ರಕರಣದಲ್ಲಿ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂಗೆ ಇ.ಡಿ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದರೆ, ಮತ್ತೊಂದೆಡೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸಿದ್ದ ಏರ್ ಸೆಲ್ –ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದಂತೆ ಪುತ್ರ ಕಾರ್ತಿ ಚಿದಂಬರಂಗೆ ಗುರುವಾರ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.
ಒಂದು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಅದೇ ಮೊತ್ತದ ಭದ್ರತೆಯ ಮೇಲೆ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದಾಗಿ ವರದಿ ತಿಳಿಸಿದೆ.
ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ. ಹೀಗಾಗಿ ಇದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದೇವೆ. ಯಾವಾಗ ವಿಚಾರಣೆಗೆ ಬೇಕೋ ಆ ಸಂದರ್ಭದಲ್ಲಿ ತನಿಖಾ ಸಂಸ್ಥೆಗೆ ಲಭ್ಯರಾಗಬೇಕು ಎಂದು ನಿರ್ದೇಶನ ನೀಡಿದೆ.
ಅಷ್ಟೇ ಅಲ್ಲ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ಸಾಕ್ಷ್ಯವನ್ನು ನಾಶ ಮಾಡಬಾರದು, ಅನುಮತಿ ಇಲ್ಲದೆ ದೇಶ ಬಿಟ್ಟುಹೋಗುವಂತಿಲ್ಲ ಎಂದು ಕೋರ್ಟ್ ಷರತ್ತು ವಿಧಿಸಿ ಕಾರ್ತಿ ಚಿದಂಬರಂಗೆ ನಿರೀಕ್ಷಣಾ ಜಾಮೀನು ನೀಡಿದೆ.