ಸಿಧುಗಾಗಿ ಪಾಕಿಸ್ಥಾನ ಲಾಬಿ? ಕ್ಯಾ| ಅಮರಿಂದರ್ ಗಂಭೀರ ಆರೋಪ
ಪಂಜಾಬ್ ಸಂಪುಟದಲ್ಲಿ ಹಸ್ತಕ್ಷೇಪ ಮಾಡಿತ್ತು ಪಾಕಿಸ್ಥಾನ
Team Udayavani, Jan 25, 2022, 7:45 AM IST
ಹೊಸದಿಲ್ಲಿ: “ಪಂಜಾಬ್ ಸರಕಾರದ ಸಂಪುಟ ವಿಸ್ತರಣೆಯಲ್ಲಿ ಪಾಕಿಸ್ಥಾನ ಸರಕಾರ ಹಸ್ತಕ್ಷೇಪ ಮಾಡಿತ್ತು.’
ಇಂಥದ್ದೊಂದು ಗಂಭೀರ ಆರೋಪವನ್ನು ಪಂಜಾಬ್ ಮಾಜಿ ಸಿಎಂ, ಕ್ಯಾ| ಅಮರಿಂದರ್ ಸಿಂಗ್ ಹೊರಿಸಿದ್ದಾರೆ. “ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರೇ ನವಜೋತ್ ಸಿಂಗ್ ಸಿಧು ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುವಂತೆ ಲಾಬಿ ಮಾಡಿದ್ದರು’ ಎಂಬ ಆಘಾತಕಾರಿ ಮಾಹಿತಿಯನ್ನು ಸೋಮವಾರ ಕ್ಯಾ| ಅಮರಿಂದರ್ ಬಹಿರಂಗ ಪಡಿಸಿದ್ದಾರೆ.
ಪ್ರಸ್ತುತ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಪಂಜಾಬ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಸಿಂಗ್ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ್ದಾರೆ. “ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪರವಾಗಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಲಾಬಿ ಮಾಡಿದ್ದರು. ಸಿಧುವನ್ನು ಸಂಪುಟದಿಂದ ಕಿತ್ತುಹಾಕಿದ ಬಳಿಕ ನನಗೆ ಪಾಕಿಸ್ಥಾನದಿಂದ ಸಂದೇಶ ಬಂದಿತ್ತು. ಸಿಧು ನನ್ನ (ಇಮ್ರಾನ್) ಹಳೆಯ ಸ್ನೇಹಿತ. ಅವರನ್ನು ಸಂಪುಟದಲ್ಲಿ ಉಳಿಸಿಕೊಂಡರೆ ನಾನು ನಿಮಗೆ ಆಭಾರಿಯಾಗಿರುತ್ತೇನೆ. ಸಿಧು ಸರಿಯಾಗಿ ಕೆಲಸ ಮಾಡದಿದ್ದರೆ, ಅವರನ್ನು ಆಮೇಲೆ ಬೇಕಿದ್ದರೆ ಕಿತ್ತುಹಾಕಿ ಎಂಬ ಸಲಹೆಯನ್ನೂ ನೀಡಲಾಗಿತ್ತು’ ಎಂದು ಕ್ಯಾ| ಅಮರಿಂದರ್ ಹೇಳಿದ್ದಾರೆ.
ಇದನ್ನೂ ಓದಿ:ಪಾಕಿಸ್ಥಾನದ ಪರ ಅಖಿಲೇಶ್ ಅನುಕಂಪದ ಮಾತು : ಬಿಜೆಪಿ ಆಕ್ರೋಶ
65 ಸೀಟುಗಳಲ್ಲಿ ಬಿಜೆಪಿ ಸ್ಪರ್ಧೆ: ಪಂಜಾಬ್‌ನಲ್ಲಿ ಬಿಜೆಪಿ ಮಿತ್ರಪಕ್ಷಗಳ ಸೀಟು ಹಂಚಿಕೆ ಅಂತಿಮಗೊಂಡಿದೆ. ಬಿಜೆಪಿ 65 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದೆ. ಕ್ಯಾ| ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ್ ಕಾಂಗ್ರೆಸ್ 37 ಹಾಗೂ ಎಸ್‌ಎಡಿ(ಸಂಯುಕ್ತ) 15ರಲ್ಲಿ ಸ್ಪರ್ಧಿಸಲಿದೆ.
ಅಭ್ಯರ್ಥಿ ಆಯ್ಕೆಯೇ ಹಗರಣ?: ಪಂಜಾಬ್ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಆಮ್ ಆದ್ಮಿ ಪಕ್ಷ ನಡೆಸಿದ ಸಮೀಕ್ಷೆಯೇ ದೊಡ್ಡ “ಹಗರಣ’ ಎಂದು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಆರೋಪಿಸಿದ್ದಾರೆ. ಈ ರೀತಿಯ “ನಕಲಿ ಅಭಿಯಾನ’ ನಡೆಸಿರುವ ಆಪ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಚುನಾವಣ ಆಯೋಗಕ್ಕೆ ಮನವಿ ಮಾಡಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.
ವೀಡಿಯೋ ವ್ಯಾನ್‌ಗಳಿಗೆ ಷರತ್ತು
ಪಂಚರಾಜ್ಯಗಳ ಚುನಾವಣಾ ಪ್ರಚಾರಕ್ಕೆ ವೀಡಿಯೋ ವ್ಯಾನ್‌ಗಳನ್ನು ಬಳಸಬಹುದು ಎಂದು ಇತ್ತೀಚೆಗೆ ಹೇಳಿದ್ದ ಚುನಾವಣಾ ಆಯೋಗ, ಈಗ ಅವುಗಳ ಬಳಕೆಗೆ ಕೆಲವು ಷರತ್ತುಗಳನ್ನು ವಿಧಿಸಿದೆ. ವ್ಯಾನ್‌ಗಳು ಒಂದು ಪ್ರದೇಶದಲ್ಲಿ 30 ನಿಮಿಷಕ್ಕಿಂತ ಹೆಚ್ಚು ಇರುವಂತಿಲ್ಲ, ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸುವಂತಿಲ್ಲ, ಬೆ.8ರಿಂದ ರಾತ್ರಿ 8ರವರೆಗೆ ಮಾತ್ರ ಕಾರ್ಯನಿರ್ವಹಿಸಬೇಕು ಎಂಬಿತ್ಯಾದಿ ಷರತ್ತುಗಳುಳ್ಳ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.