ಪಾಕಿಸ್ತಾನಕ್ಕೆ ಸೇನಾ ತರಬೇತಿ ಮುಂದುವರಿಸಲು ಅಮೆರಿಕ ಸರ್ಕಾರ ನಿರ್ಧಾರ!
Team Udayavani, Jan 4, 2020, 7:23 PM IST
ನವದೆಹಲಿ: ಪಾಕಿಸ್ತಾನಕ್ಕೆ ಸೇನಾ ತರಬೇತಿ ನೀಡುವುದನ್ನು ಮುಂದುವರಿಸಲು ಅಮೆರಿಕ ಸರ್ಕಾರ ನಿರ್ಧರಿಸಿದೆ. ಆದರೆ ಸೇನೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ನೆರವು ನೀಡುವುದನ್ನು ಸದ್ಯಕ್ಕೆ ತಡೆ ಹಿಡಿಯಲು ತೀರ್ಮಾನಿಸಲಾಗಿದೆ.
ಈ ಬಗ್ಗೆ ಅಧ್ಯಕ್ಷ ಟ್ರಂಪ್ ನಿರ್ಧಾರ ಕೈಗೊಂಡಿದ್ದಾರೆ ಎಂದು ದಕ್ಷಿಣ ಮತ್ತು ಕೇಂದ್ರ ಏಷ್ಯಾ ವ್ಯವಹಾರಗಳ ಅಮೆರಿಕದ ಸಹಾಯಕ ಸಚಿವೆ ಅಲೀಸ್ ವೆಲ್ಸ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇದಕ್ಕೂ ಮೊದಲು ಪಾಕಿಸ್ತಾನ ಸೇನಾ ಮುಖ್ಯಸ್ಥ ಜ.ಖಮರ್ ಬಾಜ್ವಾ ಹಾಗೂ ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪೊಂಪ್ಯೋ ನಡುವೆ ಮಾತುಕತೆ ನಡೆದಿತ್ತು.
2018ರ ಆಗಸ್ಟ್ನಲ್ಲಿ ಅಧ್ಯಕ್ಷ ಟ್ರಂಪ್ ಪಾಕಿಸ್ತಾನಕ್ಕೆ ಮಿಲಿಟರಿ ತರಬೇತಿ, 2 ಬಿಲಿಯನ್ ಡಾಲರ್ ಮೊತ್ತದ ಮಿಲಿಟರಿ ನೆರವು ನೀಡಿಕೆಯನ್ನು ತಡೆ ಹಿಡಿಯುವ ನಿರ್ಧಾರ ಪ್ರಕಟಿಸಿದ್ದರು. ಭಯೋತ್ಪಾದನೆ ತಡೆಯುವ ನಿಟ್ಟಿನಲ್ಲಿ ಯಾವ ಕ್ರಮವನ್ನೂ ಪಾಕ್ ಸರ್ಕಾರ ಕೈಗೊಂಡಿಲ್ಲ ಎಂಬ ಕಾರಣಕ್ಕಾಗಿ ಟ್ರಂಪ್ ನೆರವು ತಡೆ ಹಿಡಿದಿದ್ದರು. ಸದ್ಯ ಮಿಲಿಟರಿ ತರಬೇತಿ ನೀಡುವುದು ಪುನಾರಂಭವಾಗಲಿದೆ. ಆದರೆ ನೆರವು ತಡೆ ಹಿಡಿಯುವ ನಿರ್ಧಾರ ಮುಂದುವರಿಯಲಿದೆ ಎಂದು ಅಲೀಸ್ ವೆಲ್ಸ್ ತಿಳಿಸಿದ್ದಾರೆ.