ಪಾರೀಕರ್ ಚೇತರಿಕೆ: ಸಿಎಂ ಕಾರ್ಯಾಲಯ
Team Udayavani, Feb 21, 2018, 9:47 AM IST
ಪಣಜಿ: ಮೇಧೋಜೀರಕ ಗ್ರಂಥಿ (ಪ್ಯಾಂಕ್ರಿಯಾಟಿಕ್) ಯ ಸಮಸ್ಯೆಯಿಂದ ಬಳಲುತ್ತಿರುವ ಗೋವಾ ಸಿಎಂ ಮನೋಹರ್ ಪಾರೀಕರ್ ಅವರು ಚೇತರಿಸಿಕೊಳ್ಳುತ್ತಿದ್ದು, ವೈದ್ಯರ ನಿಗಾದಲ್ಲಿದ್ದಾರೆ. ಇನ್ನು ಒಂದೆರಡು ದಿನಗಳಲ್ಲೇ ಅವರು ಆಸ್ಪತ್ರೆಯಿಂದ ಬಿಡುಗಡೆ ಯಾಗಲಿದ್ದಾರೆ ಎಂದು ಮುಖ್ಯಮಂತ್ರಿ ಕಾರ್ಯಾಲಯ ಮಂಗಳ ವಾರ ತಿಳಿಸಿದೆ. ಅಲ್ಲದೆ, ಅವರು ಆಸ್ಪತ್ರೆಯಿಂದಲೇ ಬಜೆಟ್ ಪ್ರತಿಯನ್ನು ಕೂಡ ಪರಿಶೀಲಿಸುತ್ತಿದ್ದಾರೆ ಎಂದೂ ಹೇಳಿದೆ.
ಇನ್ನೊಂದೆಡೆ ಗೋವಾ ಸಂಸದ, ಬಿಜೆಪಿ ಪ್ರಧಾನ ಕಾರ್ಯದರ್ಶಿ ನರೇಂದ್ರ ಸವಾಯ್ಕರ್ ಅವರು ಮಾತನಾಡಿ, ಮುಂಬಯಿಯ ಲೀಲಾವತಿ ಆಸ್ಪತ್ರೆಯಲ್ಲಿರುವ ಪಾರೀಕರ್ ಅವರು ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಅಮೆರಿಕಕ್ಕೆ ಕರೆದೊಯ್ಯಲಾಗುತ್ತದೆ ಎಂಬ ಸುದ್ದಿಗಳೆಲ್ಲ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದಿದ್ದಾರೆ. ಆದರೆ, ಲೀಲಾವತಿ ಆಸ್ಪತ್ರೆಯ ವೈದ್ಯರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಪಾರೀಕರ್ ಆರೋಗ್ಯ ಸುಧಾರಣೆಗಾಗಿ ಗೋವಾದ ಅನೇಕ ದೇವಾಲಯಗಳಲ್ಲಿ ಮಂಗಳವಾರ ವಿಶೇಷ ಪೂಜೆ ನಡೆಸಲಾಗಿದೆ. ತಮ್ಮ ನಾಯಕ ಬೇಗನೆ ಗುಣಮುಖರಾಗಿ ಬರಲಿ ಎಂದು ಜನ ಪ್ರಾರ್ಥಿಸಿದ್ದಾರೆ.