
“ಡಬಲ್’ ಅನುಕೂಲ ಅರಿಯಿರಿ; ಡಬಲ್ ಎಂಜಿನ್ ಲಾಭಕ್ಕೆ ಉದ್ಯೋಗ ಮೇಳವೇ ಸಾಕ್ಷಿ
71 ಸಾವಿರ ನೇಮಕಾತಿ ಪತ್ರ ಹಸ್ತಾಂತರದ ವೇಳೆ ಪ್ರಧಾನಿ ಮೋದಿ
Team Udayavani, Nov 23, 2022, 6:50 AM IST

ನವದೆಹಲಿ: “ಕಳೆದ ಒಂದು ತಿಂಗಳಿಂದ ಎನ್‌ಡಿಎ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಉದ್ಯೋಗ ಮೇಳಗಳು ನಡೆಯುತ್ತಿವೆ. ಡಬಲ್ ಎಂಜಿನ್ ಸರ್ಕಾರಗಳಿಂದಾಗುವ ಅನುಕೂಲಕ್ಕೆ ಈ ಮೇಳಗಳೇ ಸಾಕ್ಷಿ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಮಂಗಳವಾರ ದೆಹಲಿಯಲ್ಲಿ ಕೇಂದ್ರ ಸರ್ಕಾರ ಆಯೋಜಿಸಿದ್ದ 2ನೇ ರೋಜ್‌ಗಾರ್ ಮೇಳದಲ್ಲಿ, ವಿಡಿಯೋ ಕಾನ್ಫರೆನ್ಸ್ ಮೂಲಕ 71 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ನೇಮಕಾತಿ ಪತ್ರವನ್ನು ಹಸ್ತಾಂತರಿಸಿ ಅವರು ಮಾತನಾಡಿದರು.
“ಇದುವೇ ಡಬಲ್ ಎಂಜಿನ್ ಸರ್ಕಾರದ ಡಬಲ್ ಅನುಕೂಲ. ನಮ್ಮ ಯುವಜನರಿಗೆ ನೇಮಕಾತಿ ಪತ್ರ ಹಸ್ತಾಂತರಿಸುವ ಅಭಿಯಾನ ಸುಸ್ಥಿರವಾಗಿ ಮುಂದುವರಿಯಬೇಕು. ಒಂದು ತಿಂಗಳಿಂದ ಎನ್‌ಡಿಎ ಆಡಳಿತದಲ್ಲಿರುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಈ ಕೆಲಸ ನಡೆಯುತ್ತಿದೆ. ಮಹಾರಾಷ್ಟ್ರ ಮತ್ತು ಗುಜರಾತ್‌ಗಳಲ್ಲಿ ಸಾವಿರಾರು ನೇಮಕ ಪತ್ರ ವಿತರಿಸಲಾಗಿದೆ.
ಉತ್ತರಪ್ರದೇಶ, ಜಮ್ಮು-ಕಾಶ್ಮೀರ, ಲಡಾಖ್, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ, ದಾದ್ರಾ-ನಗರ್ ಹವೇರಿ, ದಾಮನ್ ಮತ್ತು ದಿಯು ಸೇರಿದಂತೆ ಹಲವೆಡೆ ರೋಜ್‌ಗಾರ್ ಮೇಳಗಳು ನಡೆದಿವೆ. ದೇಶದ ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸಲು ನಮ್ಮ ಸರ್ಕಾರ ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿರುವುದು ಇದರಿಂದ ಸಾಬೀತಾಗುತ್ತದೆ’ ಎಂದೂ ಮೋದಿ ಹೇಳಿದರು.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಹೊರತುಪಡಿಸಿ ದೇಶಾದ್ಯಂತ 45 ಪ್ರದೇಶಗಳಲ್ಲಿ ಮಂಗಳವಾರ ಯುವಜನರಿಗೆ ಉದ್ಯೋಗ ನೇಮಕಾತಿ ಪತ್ರದ ಪ್ರತಿಗಳನ್ನು ನೀಡಲಾಯಿತು. ಅಕ್ಟೋಬರ್‌ನಲ್ಲಿ ನಡೆದ ಮೊದಲ ಹಂತದ ಉದ್ಯೋಗ ಮೇಳದಲ್ಲಿ 75 ಸಾವಿರ ಮಂದಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಗಿತ್ತು.
ಗ್ರಾಮೀಣಾಭಿವೃದ್ಧಿ ಅನುದಾನ ಶೇ.18 ಹೆಚ್ಚಳ?
ಕೇಂದ್ರ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ನೀಡಲಾಗುವ ಅನುದಾನವನ್ನು ಶೇ.18ರಷ್ಟು (1.60 ಲಕ್ಷ ಕೋಟಿ ರೂ.ಗಳಿಗೆ) ಏರಿಕೆ ಮಾಡುವ ಸಾಧ್ಯತೆಯಿದೆ. ಉದ್ಯೋಗ ಯೋಜನೆಗೆ ಒತ್ತು ನೀಡುವ ಸಲುವಾಗಿ ಈ ಚಿಂತನೆ ನಡೆಸಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಗ್ರಾಮೀಣ ಪ್ರದೇಶಕ್ಕೆಂದು ಕೇಂದ್ರ ಸರ್ಕಾರವು 2022-23ರಲ್ಲಿ 1.36 ಲಕ್ಷ ಕೋಟಿ ರೂ.ಗಳ ಅನುದಾನವನ್ನು ಘೋಷಿಸಿತ್ತು. ಆದರೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಬೇಡಿಕೆ ಗಣನೀಯವಾಗಿ ಹೆಚ್ಚಾಗಿರುವ ಕಾರಣ, ಅನುದಾನ ಹೆಚ್ಚಳ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಡಿ.7ರಂದು ಆರಂಭವಾಗಲಿರುವ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಈ ಹೆಚ್ಚುವರಿ ಅನುದಾನಕ್ಕೆ ಸರ್ಕಾರ ಒಪ್ಪಿಗೆ ಪಡೆಯುವ ಸಾಧ್ಯತೆಯಿದೆ.
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಪ್ರಧಾನಿ ಮೋದಿ ಹೇಳಿದ್ದರು. ಅದರಂತೆ ಕಳೆದ 8 ವರ್ಷಗಳಲ್ಲಿ 16 ಕೋಟಿ ಉದ್ಯೋಗವನ್ನು ನೀಡಬೇಕಾಗಿತ್ತು. ಆದರೆ, ಕೇವಲ ಸಾವಿರದ ಲೆಕ್ಕದಲ್ಲಿ ನೇಮಕಾತಿ ಪತ್ರ ನೀಡುತ್ತಿರುವುದು ಎಲೆಕ್ಷನ್ ಸ್ಟಂಟ್ ಅಲ್ಲದೆ ಬೇರೇನೂ ಅಲ್ಲ.
– ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಚೇರಿಯಲ್ಲಿ ಕುರ್ಚಿ ವಿಚಾರಕ್ಕೆ ವಾಗ್ವಾದ ; ಸಹೋದ್ಯೋಗಿಯ ಮೇಲೆ ಗುಂಡು!

ಜನಪ್ರತಿನಿಧಿಗಳಿಗೂ ಜನಸಾಮಾನ್ಯರಿಗೂ ಒಂದೇ ನಿಯಮ; ಸುಪ್ರೀಂ ಕೋರ್ಟ್

“ಆಡಿದ್ದು ಸಾಕು ಓದು” ಎಂದ ಅಪ್ಪನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ 9 ವರ್ಷದ ಮಗಳು

ಮಹಾರಾಷ್ಟ್ರ: ರಾಮಮಂದಿರದ ಹೊರಗಡೆ ಗುಂಪು ಘರ್ಷಣೆ; ಪೊಲೀಸ್ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ

ಭಾರತದಲ್ಲಿ ಪಾಕ್ ಸರ್ಕಾರದ ಟ್ವಿಟರ್ ಖಾತೆಗೆ ಮತ್ತೆ ತಡೆ