KMP Expressway 8ವರ್ಷ ವಿಳಂಬಕ್ಕೆ ಕಾಂಗ್ರೆಸ್ ಕಾರಣ: ಪ್ರಧಾನಿ ಮೋದಿ
Team Udayavani, Nov 19, 2018, 3:35 PM IST
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಂದು ಗುರುಗ್ರಾಮದಲ್ಲಿ ಕುಂಡ್ಲಿ-ಮಾನೇಸಾರ್-ಪಲವಾಲ್ (ಕೆಎಂಪಿ) ಎಕ್ಸ್‌ಪ್ರೆಸ್ ವೇ ಉದ್ಘಾಟಿಸಿದರು.
ಮಹತ್ವಾಕಾಂಕ್ಷೆಯ ಈ ಬಹೂಪಯೋಗಿ ಎಕ್ಸ್‌ಪ್ರೆಸ್ ವೇ ಕಾಮಗಾರಿಯ ಅಸಾಮಾನ್ಯ ವಿಳಂಬಕ್ಕೆ ಹಿಂದಿನ ಸರಕಾರಗಳೇ ಕಾರಣ ಎಂದು ಪ್ರಧಾನಿ ತಮ್ಮ ಉದ್ಘಾಟನಾ ಭಾಷಣದಲ್ಲಿ ದೂರಿದರು.
ಆದರೆ ಇನ್ನೂ ಕಾಮಗಾರಿ ಪೂರ್ಣಗೊಳ್ಳದ ಈ ಎಕ್ಸ್‌ಪ್ರೆಸ್ ವೇ ಯನ್ನು ಇಷ್ಟೊಂದು ತರಾತುರಿಯಲ್ಲಿ, ರಾಜಕೀಯ ಲಾಭಕ್ಕಾಗಿ, ಉದ್ಘಾಟಿಸುತ್ತಿರುವ ಪ್ರಧಾನಿ ಮೋದಿ ಅವರ ಕೇಂದ್ರ ಮತ್ತು ರಾಜ್ಯ ಸರಕಾರದ ಉದ್ದೇಶ ಸ್ಪಷ್ಟವಿದೆ ಎಂದು ಕಾಂಗ್ರೆಸ್ ಟೀಕಿಸಿತು.
ಈ ಎಕ್ಸ್‌ಪ್ರೆಸ್ ವೇ 2010ರಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಸಂದರ್ಭದಲ್ಲೇ ಬಳಕೆಗೆ ಬರಬೇಕಾಗಿತ್ತು. ಆದರೆ ಹಿಂದಿನ ಸರಕಾರದ ಕಾರ್ಯಶೈಲಿ ಬೇರೆ ರೀತಿ ಇದ್ದುದೇ ಇಷ್ಟೊಂದು ವಿಳಂಬಕ್ಕೆ ಕಾರಣವಾಗಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭ್ರಷ್ಟಾಚಾರ ತುಂಬಿಕೊಂಡಿದ್ದಂತೆ ಈ ಎಕ್ಸ್‌ಪ್ರೆಸ್ ವೇ ಕಾಮಗಾರಿ ಕೂಡ ಭ್ರಷ್ಟಾಚಾರದ ಶಾಪಕ್ಕೆ ಗುರಿಯಾಯಿತು ಎಂದು ಮೋದಿ ಹೇಳಿದರು.
ಎಕ್ಸ್‌ಪ್ರೆಸ್ ವೇ ಉದ್ಘಾಟನೆಯನ್ನು ಟೀಕಿಸಿದ ಕಾಂಗ್ರೆಸ್, ಕಾಮಗಾರಿ ಅಪೂರ್ಣವಾಗಿರುವಾಗಲೇ ಇದರ ಉದ್ಘಾಟನೆ ನಡೆದಿರುವುದು ಗುತ್ತಿಗೆದಾರ ಖಾಸಗಿ ಕಂಪೆನಿಗೆ ತಿಂಗಳಿಗೆ 26 ಕೋಟಿ ರೂ. ಸಂಪಾದಿಸುವುದಕ್ಕೆ ಅನುಕೂಲ ಮಾಡಿಕೊಡಲು ಮತ್ತು ರಾಜಕೀಯ ಲಾಭ ಪಡೆಯಲು ಪ್ರಧಾನಿ ಮೋದಿ ಇದನ್ನು ತರಾತುರಿಯಿಂದ ಉದ್ಘಾಟಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್‌ಜೇವಾಲಾ ಆರೋಪಿಸಿದರು.
136 ಕಿ.ಮೀ. ಉದ್ದದ ಕೆಎಂಪಿ ಎಕ್ಸ್‌ಪ್ರೆಸ್ ವೇ ಅಥವಾ ವೆಸ್ಟರ್ನ್ ಪೆರಿಫರಲ್ ಎಕ್ಸ್‌ಪ್ರೆಸ್ ವೇ ಯನ್ನು ಹರಿಯಾಣ ಸರಕಾರ ನಿರ್ಮಿಸಿದೆ. ಆದರೆ ಇದರ ಒಟ್ಟು ಖರ್ಚನ್ನು ದಿಲ್ಲಿ ಸರಕಾರ, ಉತ್ತರ ಪ್ರದೇಶ ಸರಕಾರ ಮತ್ತು ಹರಿಯಾಣ ಸರಕಾರ 50 : 25 : 25 ರ ಅನುಪಾತದಲ್ಲಿ ಹಂಚಿಕೊಂಡಿವೆ.
ಈ ನೂತನ ಎಕ್ಸ್‌ಪ್ರೆಸ್ ವೇ ನಾಲ್ಕು ರಾಷ್ಟ್ರೀಯ ಹೆದ್ದಾರಿಗಳನ್ನು (ನಂಬರ್ 1, 10, 8 ಮತ್ತು 2) ಎಂಟು ಜಿಲ್ಲೆಗಳ ಮೂಲಕ (ಸೋನೆಪತ್, ಝಜ್ಜರ್, ಗುರುಗ್ರಾಮ್, ಮೇವಾತ್ ಮತ್ತು ಪಲವಾಲ್) ಸಂಪರ್ಕಿಸುತ್ತದೆ. ಇದರಿಂದಾಗಿ ರಾಷ್ಟ್ರ ರಾಜಧಾನಿ ಪ್ರಾಂತ್ಯದಲ್ಲಿನ ವಾಹನ ದಟ್ಟನೆಯನ್ನು ಬಹುಮಟ್ಟಿಗೆ ನಿವಾರಿಸುತ್ತದೆ.