ಮೇಧಾ ಪಾಟ್ಕರ್ ರೊಂದಿಗೆ ರಾಹುಲ್ ಹೆಜ್ಜೆ: ಪ್ರಧಾನಿ ಮೋದಿ ಕಿಡಿ
Team Udayavani, Nov 20, 2022, 3:55 PM IST
ಧೋರಾಜಿ : ‘ಭಾರತ್ ಜೋಡೋ ಯಾತ್ರೆ’ಯಲ್ಲಿ ‘ನರ್ಮದಾ ಬಚಾವೋ’ ಆಂದೋಲನ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರೊಂದಿಗೆ ನಡೆದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.
ಧೋರಾಜಿಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ “ಮೂರು ದಶಕಗಳಿಂದ ನರ್ಮದಾ ಅಣೆಕಟ್ಟು ಯೋಜನೆಯನ್ನು ಸ್ಥಗಿತಗೊಳಿಸಿದ ಮಹಿಳೆಯೊಂದಿಗೆ ಕಾಂಗ್ರೆಸ್ ನಾಯಕರೊಬ್ಬರು ಪಾದಯಾತ್ರೆ ನಡೆಸುತ್ತಿರುವುದು ಕಂಡುಬಂದಿದೆ” ಎಂದು ಹೇಳಿದರು.
ನರ್ಮದಾ ಅಣೆಕಟ್ಟಿನ ವಿರುದ್ಧ ಹೊರಾಟ ನಡೆಸಿದವರ ಹೆಗಲ ಮೇಲೆ ಕೈಯಿಟ್ಟುಕೊಂಡು ಪಾದಯಾತ್ರೆ ನಡೆಸುತ್ತಿದ್ದೀರಾ ಎಂದು ನಿಮ್ಮ ಮತ ಕೇಳುವ ವಿಚಾರ ಬಂದಾಗ ಕಾಂಗ್ರೆಸ್ ನವರನ್ನು ಕೇಳಿ. ನರ್ಮದಾ ಅಣೆಕಟ್ಟು ಕಟ್ಟದೇ ಇದ್ದಿದ್ದರೆ ಏನಾಗುತ್ತಿತ್ತು ಎಂದು ಮೋದಿ ಪ್ರಶ್ನಿಸಿದರು.
ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಗುಜರಾತ್ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಗುಜರಾತ್ನ ಒಟ್ಟು 182 ವಿಧಾನಸಭಾ ಸ್ಥಾನಗಳ ಪೈಕಿ 89 ಸ್ಥಾನಗಳಿಗೆ ಡಿಸೆಂಬರ್ 1 ರಂದು ಮತ್ತು ಉಳಿದ 93 ಸ್ಥಾನಗಳಿಗೆ ಡಿಸೆಂಬರ್ 5 ರಂದು ಮತದಾನ ನಡೆಯಲಿದೆ.