15 ವರ್ಷದಲ್ಲಿ ಕಾಂಗ್ರೆಸ್ ಮಣಿಪುರದಲ್ಲಿ ಅಭಿವೃದ್ಧಿ ಮಾಡಿಲ್ಲ; ಮೋದಿ
Team Udayavani, Feb 25, 2017, 2:53 PM IST
ಇಂಫಾಲ್:ಮಣಿಪುರ ವಿಧಾನಸಭಾ ಚುನಾವಣೆಗೆ ಒಂದು ವಾರ ಬಾಕಿ ಇರುವ ನಡುವೆಯೇ ಶನಿವಾರ ರಾಜ್ಯಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಕಟು ಟೀಕಾಪ್ರಹಾರ ನಡೆಸಿದರು.
ಕಳೆದ 15 ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ಮಣಿಪುರದಲ್ಲಿ ಅಭಿವೃದ್ಧಿಯನ್ನೇ ಕಡೆಗಣಿಸಿದೆ, ಮಣಿಪುರದ ಅಭಿವೃದ್ಧಿ ನಾಶವಾಗಿ ಹೋಗಿರುವುದಕ್ಕೆ ಹೊಣೆಗಾರರು ಯಾರು? ಎಂದು ಪ್ರಶ್ನಿಸಿದರು.
ಇಲ್ಲಿನ ಮುಖ್ಯಮಂತ್ರಿ ಕಳೆದ 15 ವರ್ಷಗಳಿಂದ ಮಣಿಪುರದಲ್ಲಿ ಅಧಿಕಾರದ ಕುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ. ಮಣಿಪುರವನ್ನು ಪೂರ್ವದ ಸ್ವಿಟ್ಜರ್ ಲ್ಯಾಂಡ್ ಎಂದೇ ಪರಿಗಣಿಸಲಾಗುತ್ತಿದೆ. ಆದರೆ ನಿಮಗೇನಾದರೂ ಮಣಿಪುರದಲ್ಲಿ ಅಭಿವೃದ್ಧಿಯಾಗಿರುವುದು ಕಾಣಿಸುತ್ತಿದೆಯೇ, ಯುವಕರಿಗೆ ಏನಾದರು ಉದ್ಯೋಗ ಎಂದು ನೆರೆದ ಜನಸ್ತೋಮವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಪ್ರಶ್ನಿಸಿದರು.
ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಒಂದು ಬಾರಿ ಅಧಿಕಾರ ಕೊಡಿ, ಬಳಿಕ ಪಕ್ಷ ಮಣಿಪುರದ ಜನರ ಸೇವೆಯನ್ನು ಮಾಡಲಿದೆ. ನೀವು ಕಾಂಗ್ರೆಸ್ ಗೆ 15 ವರ್ಷ ಅಧಿಕಾರ ಕೊಟ್ಟಿದ್ದೀರಿ, ಆದರೆ ನೀವು ನಮಗೆ ಕೇವಲ 5 ವರ್ಷ ಕೊಡಿ ಎಂದು ಮನವಿ ಮಾಡಿಕೊಂಡಾಗ ರಾಲಿಯಲ್ಲಿ ನೆರೆದಿದ್ದ ಜನಸ್ತೋಮ ಕರತಾಡನ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದರು.