ನಟ ಅಕ್ಕಿ ಜೊತೆ ಪ್ರಧಾನಿ ಮೋದಿ ‘ಮನ್‌ ಕಿ ಬಾತ್‌’!

ನಟ ಅಕ್ಷಯ್‌ ಕುಮಾರ್‌ ಮಾಡಿದ ಪ್ರಧಾನಿ ಸಂದರ್ಶನದ ಹೈಲೈಟ್ಸ್‌ ಇಲ್ಲಿದೆ...

Team Udayavani, Apr 24, 2019, 2:21 PM IST

ನವದೆಹಲಿ: ಲೋಕಸಭಾ ಚುನಾವಣೆಗಳ ಮೂರನೇ ಹಂತದ ಮತದಾನ ನಿನ್ನೆಯಷ್ಟೇ ಮುಕ್ತಾಯಗೊಂಡಿದೆ. ಇನ್ನೂ ನಾಲ್ಕು ಹಂತಗಳ ಮತದಾನ ನಡೆಯಬೇಕಿದೆ. ವಿವಿಧ ಪಕ್ಷಗಳ ರಾಜಕೀಯ ನಾಯಕರು ರಾಜ್ಯಗಳನ್ನು ಸುತ್ತುತ್ತಾ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಹಾಗೆಯೇ ಪ್ರಧಾನಿ ನರೆಂದ್ರ ಮೋದಿಯವರೂ ಸಹ ಪ್ರತೀದಿನ ದೇಶದ ವಿವಿಧ ಕಡೆಗಳಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಲೇ ಇದ್ದಾರೆ.

ಇಷ್ಟೊಂದು ನಿಬಿಡ ಕಾರ್ಯಕ್ರಮಗಳ ನಡುವೆಯೂ ಪ್ರಧಾನಿ ಮೋದಿ ಅವರು ಇಂದು ಒಂದು ಸಪ್ರೈಸ್‌ ಸಂದರ್ಶನ ನೀಡಿ ಸುದ್ದಿಯಾಗಿದ್ದಾರೆ. ಮೋದಿ ಅವರನ್ನು ಸಂದರ್ಶಿಸಿರುವುದು ಭಾರತದ ಅಥವಾ ವಿದೇಶದ ಹೆಸರಾಂತ ಪತ್ರಕರ್ತರಲ್ಲ ಬದಲಿಗೆ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌!
ಹೌದು ಇದು ವಿಚಿತ್ರವಾದರೂ ಸತ್ಯ. ಪ್ರಧಾನಿ ಮೋದಿ ಅವರು ಇಂದು ನಟ ಅಕ್ಕಿ ಜೊತೆಗಿನ ಖಾಸಾ ಬಾತ್‌ ನಲ್ಲಿ ರಾಜಕೀಯ ಹೊರತಾದ ತನ್ನ ಮನದಾಳದ ಮಾತುಗಳನ್ನು ಹಂಚಿಕೊಂಡರು.

ಪ್ರಧಾನಿಯಾಗಿ ಮೋದಿ ಅವರು ಪ್ರತೀವಾರ ರೆಡಿಯೋ ಮೂಲಕ ‘ಮನ್‌ ಕಿ ಬಾತ್‌’ ಕಾರ್ಯಕ್ರಮದಲ್ಲಿ ವಾರಕ್ಕೊಂದು ವಿಷಯದ ಕುರಿತಾಗಿ ಮಾತನಾಡುತ್ತಿದ್ದರು. ಆದರೆ ಇಲ್ಲಿ ನೇರಾ ನೇರಾ ಮಾತುಕತೆಯ ಮೂಲಕ ತಮ್ಮ ಜೀವನದ ನೆನಪಿನ ಬುತ್ತಿಯನ್ನು ಪ್ರಧಾನಿ ಮೋದಿ ಬಿಚ್ಚಿಟ್ಟಿದ್ದಾರೆ. ನಟ ಅಕ್ಷಯ್‌ ಕುಮಾರ್‌ ಮಾಡಿದ ಪ್ರಧಾನಿ ಸಂದರ್ಶನದ ಹೈಲೈಟ್ಸ್‌ ಇಲ್ಲಿದೆ.

ವಿರೋಧ ಪಕ್ಷಗಳಲ್ಲಿ ನಿಮಗೆ ಮಿತ್ರರಿದ್ದಾರೆಯೇ ಎಂದು ಅಕ್ಷಯ್‌ ಕುಮಾರ್‌ ಕೇಳಿದ ಪ್ರಶ್ನೆಗೆ ಮೋದಿ ನೀಡಿದ ಉತ್ತರ ಹೀಗಿತ್ತು…
ಹೌದು, ನನಗೆ ವಿರೋಧ ಪಕ್ಷಗಳಲ್ಲಿಯೂ ಒಳ್ಳೆಯ ಮಿತ್ರರಿದ್ದಾರೆ. ಅವರನ್ನೆಲ್ಲಾ ನಾನು ವರ್ಷಕ್ಕೊಮ್ಮೆ ಭೇಟಿಯಾಗುತ್ತೇನೆ ಮತ್ತು ಕೆಲವೊಂದು ವಿಶೇಷ ಸಂದರ್ಭಗಳನ್ನು ಆ ನನ್ನ ಮಿತ್ರರೊಂದಿಗೆ ಸಂಭ್ರಮಿಸುತ್ತೇನೆ. ಕಾಂಗ್ರೆಸ್‌ ನ ಗುಲಾಂ ನಬಿ ಅಝಾದ್‌ ಅವರು ನನ್ನ ಒಳ್ಳೆಯ ಮಿತ್ರರಲ್ಲಿ ಒಬ್ಬರು. ಇನ್ನು ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವರ್ಷದಲ್ಲಿ ಒಂದು ಅಥವಾ ಎರಡು ಬಾರಿ ನನಗೆ ಕುರ್ತಾ ಹಾಗೂ ಸಿಹಿತಿಂಡಿಗಳನ್ನು ಕಳುಹಿಸಿಕೊಡುತ್ತಿರುತ್ತಾರೆ.

ಮಾತ್ರವಲ್ಲದೇ ಬಾಂಗ್ಲಾ ದೇಶದ ಪ್ರಧಾನಿ ಶೇಖ್‌ ಹಸಿನಾ ಅವರೂ ಸಹ ನನಗೆ ಸಿಹಿತಿಂಡಿಗಳನ್ನು ಕಳುಹಿಸಿಕೊಡುತ್ತಿರುತ್ತಾರೆ. ಹೀಗೆ ನನ್ನ ಖಾಸಗಿ ಜೀವನದಲ್ಲಿ ನಾನು ಬಹಳಷ್ಟು ಜನ ಮಿತ್ರರನ್ನು ಹೊಂದಿದ್ದೇನೆ.

ಪ್ರಧಾನಿ ಮೋದಿ ಅವರು ದಿನಕ್ಕೆ ಕೇವಲ ಮೂರರಿಂದ ನಾಲ್ಕು ತಾಸು ಮಾತ್ರ ನಿದ್ರಿಸುವ ವಿಚಾರದ ಕುರಿತಾಗಿ ಅಕ್ಷಯ್‌ ಕುಮಾರ್‌ ಪ್ರಶ್ನೆ ಕೇಳಿದರು. ಅದಕ್ಕೆ ಮೋದಿ ಏನು ಉತ್ತೆ ಕೊಟ್ಟರು ಗೊತ್ತೇ?
ನನ್ನ ಉತ್ತಮ ಸ್ನೇಹಿತರೂ ಆಗಿರುವ ಅಮೆರಿಕಾದ ಮಾಜೀ ಅಧ್ಯಕ್ಷ ಬರಕ್‌ ಒಬಾಮಾ ಅವರು ನಾನು ನಿದ್ರಿಸುವ ಸಮಯವನ್ನು ಹೆಚ್ಚಿಸುವಂತೆ ಪದೇಪದೇ ಹೇಳುತ್ತಿದ್ದರು. ಇಲ್ಲದಿದ್ದರೆ ನನ್ನ ಆರೋಗ್ಯ ಕೆಡಬಹುದು ಎಂಬುದು ಒಬಾಮಾ ಅವರ ಕಾಳಜಿಯಾಗಿತ್ತು. ಆದರೆ ನನಗೆ ಕೇವಲ ನಾಲ್ಕು ಗಂಟೆಗಳ ನಿದ್ರೆ ರೂಢಿಯಾಗಿಬಿಟ್ಟಿದೆ ಮತ್ತು ನನ್ನ ದೇಹಕ್ಕೆ ಅಷ್ಟೇ ನಿದ್ರೆ ಸಾಕಾಗುತ್ತದೆ ಎಂಬುದನ್ನು ಪ್ರಧಾನಿಯವರು ತಿಳಿಸಿದರು.

ತಾನೊಂದು ಸಾಮಾನ್ಯ ಕುಟುಂಬ ಹಿನ್ನಲೆಯಿಂದ ಬಂದ ವ್ಯಕ್ತಿಯಾಗಿದ್ದ ಕಾರಣದಿಂದ ಮುಂದೊಂದು ದಿನ ತಾನು ಈ ದೇಶದ ಪ್ರಧಾನಿಯಾಗಬಹುದೆಂಬ ಕಲ್ಪನೆ ನನೆಗೆಂದೂ ಹೊಳೆದಿರಲಿಲ್ಲ.
ನಾನು ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿ ನನ್ನ ಹೆಸರಿನಲ್ಲಿ ಮೊತ್ತ ಮೊದಲ ಬ್ಯಾಂಕ್‌ ಖಾತೆಯನ್ನು ತೆರೆದೆ.
– ನನಗೆ ಹಣದ ಅವಶ್ಯಕತೆ ಇಲ್ಲ ಎಂಬುದು ಗೊತ್ತಾದ ಬಳಿಕ ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿ ನನ್ನ ಬಳಿಯಿದ್ದ 21 ಲಕ್ಷ ರೂಪಾಯಿಗಳನ್ನು ನನ್ನ ಕಛೇರಿ ಸಿಬ್ಬಂದಿಗಳ ಮಕ್ಕಳಿಗಾಗಿ ನೀಡಿದೆ.
– ಸಿಟ್ಟಿಗೆ ಒಳಗಾಗುವುದರಿಂದ ನಮ್ಮಲ್ಲಿ ಋಣಾತ್ಮಕ ಅಂಶಗಳು ಪ್ರವಹಿಸುವುದರಿಂದ ನಾನೆಂದೂ ಸಿಟ್ಟಿಗೆ ಒಳಗಾಗುವುದಿಲ್ಲ. ನಾನು ಶಿಸ್ತನ್ನು ಹೆಚ್ಚಾಗಿ ಇಷ್ಟಪಡುತ್ತೇನೆ ಆದರೆ ನಾನು ಯಾರನ್ನೂ ಕೀಳಾಗಿ ಕಾಣುವುದಿಲ್ಲ ಮತ್ತು ಯಾವತ್ತೂ ಕೋಪಗೊಳ್ಳುವುದಿಲ್ಲ.
– ಒಂದು ವೇಳೆ ಏನಾದರೂ ನನಗೆ ಪಥ್ಯವಾಗದ್ದು ಆಗಿಬಿಟ್ಟ ಸಂದರ್ಭದಲ್ಲಿ ಆ ವಿಷಯವನ್ನು ನಾನು ಖಾಲಿ ಹಳೆಯೊಂದರಲ್ಲಿ ಬರೆಯುತ್ತೇನೆ ಮತ್ತು ತಕ್ಷಣ ಅದನ್ನು ಹರಿದುಹಾಕುತ್ತೇನೆ, ಮತ್ತು ನನ್ನ ಮನಸ್ಸು ಶಾಂತವಾಗುವವರೆಗೆ ನಾನು ಈ ರೀತಿ ಮಾಡುತ್ತಲೇ ಇರುತ್ತೇನೆ. ಮತ್ತು ಈ ಮೂಲಕ ನನ್ನ ಸಿಟ್ಟು ಸಂಪೂರ್ಣವಾಗಿ ಶಮನಗೊಳ್ಳುತ್ತದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ