ಸೋನಿಯಾ ಕ್ಷೇತ್ರಕ್ಕೆ ನಾಳೆ ಪ್ರಧಾನಿ ಮೋದಿ ಭೇಟಿ
Team Udayavani, Dec 15, 2018, 7:20 AM IST
ಲಕ್ನೋ: ಪ್ರಧಾನಿ ನರೇಂದ್ರ ಮೋದಿ ರವಿವಾರ (ಡಿ. 16) ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕ್ಷೇತ್ರ ರಾಯ್ಬರೇಲಿಗೆ ಭೇಟಿ ನೀಡಲಿದ್ದಾರೆ. 2019ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಸೋನಿಯಾರ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜತೆಗೆ ಹಮ್ಸಫರ್ ಎಕ್ಸ್ಪ್ರಸ್ಗೂ ಚಾಲನೆ ನೀಡಲಿದ್ದಾರೆ. 2014ರ ಚುನಾವಣೆಯಲ್ಲಿ ಅಮೇಠಿಯಿಂದ ಸಚಿವೆ ಸ್ಮತಿ ಇರಾನಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಇದರ ಹೊರತಾಗಿಯೂ ಇರಾನಿ ಆಗಾಗ ಅಮೇಠಿಗೆ ಭೇಟಿ ನೀಡಿ, ಮುಂದಿನ ಬಾರಿಯೂ ಅಲ್ಲಿಂದಲೇ ಲೋಕಸಭೆಗೆ ಆಯ್ಕೆಯಾಗುವ ಆಶಾವಾದವನ್ನೂ ಹೊಂದಿದ್ದಾರೆ.