ಅಂಗವಿಕಲರಿಗೂ ಅಂಚೆ ಮತದಾನ ಅವಕಾಶ
Team Udayavani, Oct 27, 2019, 5:56 AM IST
ಹೊಸದಿಲ್ಲಿ: ಇನ್ನು ಮುಂದೆ ಅಂಗವಿಕಲ ಹಾಗೂ 80 ಮೇಲ್ಪಟ್ಟ ವೃದ್ಧರು ಕೂಡ ಅಂಚೆ ಮತದಾನದ ಮೂಲಕ ಹಕ್ಕು ಚಲಾಯಿಸಬಹುದು. ಮತದಾನಕ್ಕೆ ನೆರವಾಗುವ ನಿಟ್ಟಿನಲ್ಲಿ ಅವರಿಗೆ ಅಂಚೆ ಮತಪತ್ರ ಕಳುಹಿಸಲಾಗುವುದು. ಇದರಿಂದ ಮತದಾನ ಪ್ರಮಾಣ ಹೆಚ್ಚಾಗಲು ಸಹಾಯವಾಗಲಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಕೇಂದ್ರ ಚುನಾವಣಾ ಆಯೋಗದ ಶಿಫಾರಸ್ಸಿನ ಪ್ರಕಾರ, ಕೇಂದ್ರ ಸರಕಾರ ಈ ತೀರ್ಮಾನ ಕೈಗೊಂಡಿದೆ. ಚುನಾವಣೆ ಕರ್ತವ್ಯನಿರತ ಭದ್ರತಾ ಪಡೆಗಳ ಮೂಲಕ ಅಂಚೆ ಮತಪತ್ರಗಳನ್ನು ತಲುಪಿಸಲಾಗುತ್ತದೆ. ಅಂಗವಿಕಲರು ಹಾಗೂ 80 ವರ್ಷ ಮೇಲ್ಪಟ್ಟ ವೃದ್ಧರು ಮತಗಟ್ಟೆಗಳಿಗೆ ಬಂದು ಮತದಾನ ಮಾಡಲು ಕಷ್ಟವಾಗುವ ಕಾರಣ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮತದಾನ ಪ್ರಮಾಣ ಏರಿಕೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 13ಎ ಫಾರಂನಲ್ಲಿ ಅಂಗವಿಕಲ ಹಾಗೂ ವಯೋವೃದ್ಧರ ಅಂಚೆ ಮತಪತ್ರ ಗಳನ್ನು ಚುನಾವಣಾಧಿಕಾರಿಗಳು ದೃಢೀಕರಿಸಬೇಕಾಗಿದೆ.
ಈವರೆಗೆ ಕೇವಲ ಸಶಸ್ತ್ರ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರು ಮತ್ತು ಮತದಾನದ ಕರ್ತವ್ಯದಲ್ಲಿ ರುವವರಿಗೆ ಮಾತ್ರ ಅಂಚೆ ಮತದಾನದ ಅವಕಾಶವಿತ್ತು.