ತನ್ನನ್ನು ಮೋದಿ ವಿರೋಧಿ ಎಂದು ಬಿಂಬಿಸುವ ಮಾಧ್ಯಮಗಳ ಯತ್ನ ಕುರಿತು ಬ್ಯಾನರ್ಜಿಗೆ ಮೋದಿ ಜೋಕ್!

Team Udayavani, Oct 22, 2019, 6:17 PM IST

ನವದೆಹಲಿ: ಅರ್ಥಶಾಸ್ತ್ರ ವಿಭಾಗದಲ್ಲಿ ಈ ಬಾರಿ ನೊಬೆಲ್ ಪ್ರಶಸ್ತಿ ವಿಜೇತರಾಗಿರುವ ಭಾರತೀಯ ಸಂಜಾತ ಅಭಿಜಿತ್ ವಿನಾಯಕ್ ಬ್ಯಾನರ್ಜಿ ಅವರು ಇಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಬ್ಯಾನರ್ಜಿ ಅವರು ದೇಶದ ಆರ್ಥಿಕತೆ ಹಾಗೂ ಆಡಳಿತ ವ್ಯವಸ್ಥೆಗಳಿಗೆ ಸಂಬಂಧಿಸಿದ ಹಲವಾರು ವಿಚಾರಗಳನ್ನು ಚರ್ಚಿಸಿದರು.

ತಮ್ಮ ಈ ಮೊದಲ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಮೋದಿ ತನ್ನೊಂದಿಗೆ ಮಾತನಾಡಿದ ರೀತಿಯನ್ನು ಮತ್ತು ಪ್ರಧಾನಿಯವರೊಂದಿಗಿನ ತಮ್ಮ ಭೇಟಿಯ ಅನುಭವಗಳನ್ನು ಬ್ಯಾನರ್ಜಿ ಅವರು ಬಳಿಕ ಮಾಧ್ಯಮಗಳೊಂದಿಗೆ ಹಂಚಿಕೊಂಡರು.

ಇವುಗಳಲ್ಲಿ ಬ್ಯಾನರ್ಜಿ ಅವರು ಪ್ರಮುಖವಾಗಿ ಹಂಚಿಕೊಂಡ ಕುತೂಹಲದ ವಿಚಾರವೆಂದರೆ ತನ್ನನ್ನು ‘ಮೋದಿ ವಿರೋಧಿ’ ಎಂದು ಬಿಂಬಿಸಲು ಭಾರತೀಯ ಮಾಧ್ಯಮಗಳು ಪಟ್ಟ ಪ್ರಯತ್ನದ ಕುರಿತಾಗಿ ಪ್ರಧಾನಿ ಮೋದಿ ಅವರು ಬ್ಯಾನರ್ಜಿ ಅವರಿಗೆ ತಮಾಷೆಯಾಗಿ ತಿಳಿಸಿದ ವಿಚಾರದ ಕುರಿತಾಗಿ.

‘ಮೋದಿ ವಿರೋಧಿ ವಿಚಾರಗಳನ್ನು ಹೇಳುವ ಮೂಲಕ ನೀವು ನನ್ನನ್ನು ಮೋದಿ ವಿರೋಧಿ ಎಂದು ಬಿಂಬಿಸಲು ಪ್ರಯತ್ನಿಸುತ್ತಿರುವ ವಿಷಯದ ಕುರಿತಾಗಿಯೇ ಪ್ರಧಾನಿ ಮೋದಿ ಅವರು ಮೊಟ್ಟಮೊದಲಿಗೆ ಪ್ರಸ್ತಾಪಿಸಿದರು. ಮತ್ತು ಅವರು ನಿಮ್ಮನ್ನು (ಮಾಧ್ಯಮಗಳನ್ನು) ಗಮನಿಸುತ್ತಿದ್ದಾರೆ ಹಾಗೂ ನನ್ನ ಕುರಿತಾಗಿ ನೀವು ಬಿಂಬಿಸಲು ಯತ್ನಿಸುತ್ತಿರುವ ಸುದ್ದಿವಿಚಾರಗಳ ಕುರಿತಾಗಿಯೂ ಪ್ರಧಾನಿಯವರಿಗೆ ಅರಿವಿದೆ’ ಎಂದು ಅಭಿಜಿತ್ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಿಳಿಸಿದರು.

ಜನರ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳುವ ಆಡಳಿತ ವ್ಯವಸ್ಥೆಯ ತುರ್ತು ಅಗತ್ಯ ಭಾರತಕ್ಕಿದೆ ಎಂಬ ವಿಚಾರವನ್ನೂ ಸಹ ಅಭಿಜಿತ್ ಬ್ಯಾನರ್ಜಿ ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಿದರು. ಪ್ರಧಾನಿ ಮೋದಿ ಅವರು ತನ್ನೊಂದಿಗೆ ನಿಗದಿಪಡಿಸಿದ್ದಕ್ಕಿತ ಹೆಚ್ಚಿನ ಸಮಯವನ್ನೇ ಕಳೆದರು ಮತ್ತು ಈ ದೇಶದ ಕುರಿತಾಗಿ ಅವರಿಗಿರುವ ಆಲೋಚನೆಗಳನ್ನು ನನ್ನ ಜೊತೆ ಹಂಚಿಕೊಂಡರು ಎಂದು ಬ್ಯಾನರ್ಜಿ ಅವರು ಮಾಧ್ಯಮಗಳ ಮುಂದೆ ತಿಳಿಸಿದರು.

ಭಾರತದ ಆಡಳಿತ ವ್ಯವಸ್ಥೆಯನ್ನು ಸುಧಾರಿಸಲು ಪ್ರಧಾನಿ ಮೋದಿ ಅವರು ಕೈಗೊಂಡಿರುವ ಕ್ರಮಗಳ ಕುರಿತಾಗಿಯೂ ಅಭಿಜಿತ್ ಬ್ಯಾನರ್ಜಿ ಅವರು ಮಾತನಾಡಿದರು. ‘ಜನರ ಭಾವನೆಗಳನ್ನು ಹೇಗೆ ಗಣನೆಗೆ ತೆಗೆದುಕೊಳ್ಳಬೇಕೆಂದು ಮತ್ತು ಆ ಮೂಲಕ ನಮ್ಮ ಆಡಳಿತ ವ್ಯವಸ್ಥೆ ಹೇಗೆ ಜನಪರವಾಗಿ ಕೆಲಸ ಮಾಡಬೇಕೆಂಬ ವಿಚಾರವನ್ನು ಪ್ರಧಾನಿಯವರು ನನಗೆ ವಿವರಿಸಿದರು’ ಎಂದು ಬ್ಯಾನರ್ಜಿ ಅವರು ಹೇಳಿದರು.

ಜನಮಟ್ಟದಲ್ಲಿ ಕಾರ್ಯನಿರ್ವಹಿಸುವ ಆಡಳಿತ ವ್ಯವಸ್ಥೆ ಬಾರತದಂತಹ ದೇಶಕ್ಕೆ ಅತೀ ಅಗತ್ಯವಾಗಿದೆ ಮತ್ತು ಜನರ ಜೀವನವನ್ನು ಅರ್ಥಮಾಡಿಕೊಂಡು ಈ ಆಡಳಿತ ವ್ಯವಸ್ಥೆ ಕಾರ್ಯನಿರ್ವಹಿಸಬೇಕಾಗಿದೆ ಎಂದು ನೋಬೆಲ್ ವಿಜೇತ ಅರ್ಥಶಾಸ್ತ್ರಜ್ಞ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ಮಾನವ ಸಂಪನ್ಮೂಲ ಸಶಕ್ತೀಕರಣ ವಿಚಾರದಲ್ಲಿ ಅಭಿಜಿತ್ ಬ್ಯಾನರ್ಜಿ ಅವರಿಗಿರುವ ಬದ್ಧತೆಯನ್ನು ಪ್ರಧಾನಿ ಮೋದಿ ಅವರು ವಿಶೇಷವಾಗಿ ಪ್ರಶಂಸಿದ್ದಾರೆ. ಮತ್ತು ಅವರ ಈ ಸಾಧನೆಯ ಕುರಿತಾಗಿ ಇಡೀ ದೇಶವೇ ಹೆಮ್ಮೆ ಪಡುತ್ತದೆ ಎಂದು ಪ್ರಧಾನಿಯವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ