ಹೈದರಾಬಾದ್ ಅತ್ಯಾಚಾರಿಗಳ ಎನ್ ಕೌಂಟರ್ ‘ಪೊಲೀಸರ ಪೂರ್ವಯೋಜಿತ ಕೃತ್ಯ’: ಸುಪ್ರೀಂ ಗೆ ವರದಿ
Team Udayavani, May 20, 2022, 3:46 PM IST
ಹೊಸದಿಲ್ಲಿ: ಹೈದರಾಬಾದ್ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಆರೋಪಿಗಳ ಎನ್‌ಕೌಂಟರ್ ಬಗ್ಗೆ ತನಿಖೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ನೇಮಿಸಿದ ತನಿಖಾ ಸಮಿತಿಯು ತನ್ನ ವರದಿಯಲ್ಲಿ ಎನ್‌ಕೌಂಟರ್ ಅನ್ನು “ಯೋಜಿತ” ಎಂದು ಹೇಳಿದೆ. ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಮೇಲೆ “ಆರೋಪಿಗಳು ಪೊಲೀಸರ ಆಯುಧ ಕಿತ್ತುಕೊಳ್ಳಲು ಪ್ರಯತ್ನ ನಡೆಸಿದ್ದಾರೆಂದು ಸುಳ್ಳು ಆರೋಪ ಮಾಡಿ ಉದ್ದೇಶಪೂರ್ವಕವಾಗಿ ಗುಂಡು ಹಾರಿಸಲಾಗಿತ್ತು” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
“ನಮ್ಮ ಪರಿಗಣಿಸಿದ ಅಭಿಪ್ರಾಯದಲ್ಲಿ, ಆರೋಪಿಗಳ ಮೇಲೆ ಉದ್ದೇಶಪೂರ್ವಕವಾಗಿ ಗುಂಡು ಹಾರಿಸಲಾಗಿದೆ.” ಎಂದು ಸಿರ್ಪುರ್ಕರ್ ಆಯೋಗದ ವರದಿ ಹೇಳಿದೆ.
ವರದಿ ಸಲ್ಲಿಕೆಯಾದ ನಂತರ, ಆಯೋಗದ ವರದಿಯ ಮೇಲೆ ಕ್ರಮ ಕೈಗೊಳ್ಳುವಂತೆ ತೆಲಂಗಾಣ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಹೇಳಿದೆ.
2019ರ ನವೆಂಬರ್ ನಲ್ಲಿ 26 ವರ್ಷದ ಪಶುವೈದ್ಯೆಯೊಬ್ಬರು ಕ್ಲಿನಿಕ್‌ಗೆ ಭೇಟಿ ನೀಡಿ ಮನೆಗೆ ತೆರಳುತ್ತಿದ್ದಾಗ ಶಾದ್ ನಗರದಲ್ಲಿ ಅತ್ಯಾಚಾರ ನಡೆಸಿ ಸಜೀವ ದಹನ ಮಾಡಲಾಗಿತ್ತು. ಬಳಿಕ ಆಕೆಯ ಶವ ಹೆದ್ದಾರಿಯ ಅಂಡರ್‌ಪಾಸ್‌ನಲ್ಲಿ ಪತ್ತೆಯಾಗಿತ್ತು.
ಇದನ್ನೂ ಓದಿ:ಏರ್ ಇಂಡಿಯಾ ವಿಮಾನದ ಎಂಜಿನ್ ಸ್ಥಗಿತ !: ಮುಂಬೈಯಲ್ಲಿ ತುರ್ತು ಭೂಸ್ಪರ್ಶ
ನಾಲ್ವರು ಆರೋಪಿಗಳಾದ ಮೊಹಮ್ಮದ್ ಆರಿಫ್, ಜೊಲ್ಲು ಶಿವ, ಜೊಲ್ಲು ನವೀನ್ ಮತ್ತು ಚೆನ್ನಕೇಶವುಲು ಅವರನ್ನು ಪೊಲೀಸರು ಎನ್‌ಕೌಂಟರ್ ನಲ್ಲಿ ಹತ್ಯೆಗೈದಿದ್ದರು. ಆಪಾದಿತ ಎನ್‌ಕೌಂಟರ್ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಮೂರು ಸದಸ್ಯರ ಆಯೋಗವನ್ನು ನೇಮಿಸಿತ್ತು. ಈ ಆಯೋಗವು ಇಂದು ತನ್ನ ವರದಿಯನ್ನು ಸಲ್ಲಿಸಿದೆ.
ಆರೋಪಿಗಳು ಪೊಲೀಸರ ಆಯುಧಗಳನ್ನು ಕಸಿದುಕೊಂಡು ನಂತರ ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂಬ ಆರೋಪಗಳು ಸುಳ್ಳು ಎಂದು ಆಯೋಗ ಹೇಳಿದೆ. 10 ಕ್ಕೂ ಹೆಚ್ಚು ಪೊಲೀಸರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಆಯೋಗವು ಶಿಫಾರಸು ಮಾಡಿದೆ.
“ದಾಖಲೆಯಲ್ಲಿರುವ ಸಂಪೂರ್ಣ ವಿಷಯವನ್ನು ಪರಿಗಣಿಸಿದ ನಂತರ, ಮೃತರು 2019 ಡಿಸೆಂಬರ್ ಆರರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳುವುದು, ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು, ಪೊಲೀಸರ ಮೇಲೆ ಹಲ್ಲೆ ಮತ್ತು ಗುಂಡು ಹಾರಿಸುವುದು ಮುಂತಾದ ಯಾವುದೇ ಅಪರಾಧವನ್ನು ಮಾಡಿಲ್ಲ ಎಂದು ನಾವು ತೀರ್ಮಾನಿಸುತ್ತೇವೆ “ತನಿಖಾ ಸಮಿತಿಯ ವರದಿ ಹೇಳಿದೆ.
ತನಿಖೆ ಪೂರ್ಣಗೊಂಡು ಅಂತಿಮ ವರದಿಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸುವವರೆಗೆ ಯಾವುದೇ ಪೊಲೀಸ್ ಅಧಿಕಾರಿಯು ತನಿಖೆಯಲ್ಲಿರುವ ಅಪರಾಧಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಬಾರದು ಎಂದು ಸೂಚಿಸಿದೆ.