ಸಂಬಿತ್ ಪಾತ್ರಾ ‘ಲೋಕ’ ಕನಸು ಭಗ್ನ
Team Udayavani, May 25, 2019, 6:00 AM IST
ನವದೆಹಲಿ: ಬಿಜೆಪಿಯ ಪ್ರಮುಖ ವಕ್ತಾರ ಹಾಗೂ ಫೈರ್‌ಬ್ರಾಂಡ್ ನಾಯಕನಾಗಿರುವ ಸಂಬಿತ್ ಪಾತ್ರಾ ಅವರ ಲೋಕಸಭೆ ಪ್ರವೇಶಿಸುವ ಕನಸು ಭಗ್ನವಾಗಿದೆ. ಒಡಿಶಾದ ಪುರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸಂಬಿತ್ ಅವರು ಕೇವಲ 11,700 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದಾರೆ. ಇವರು ಬಿಜೆಡಿ ಸಂಸದ ಪಿನಾಕಿ ಮಿಶ್ರಾ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು. ಹಿಂದಿನಿಂದಲೂ ಪುರಿ ಕ್ಷೇತ್ರದಲ್ಲಿ ಬಿಜೆಡಿಯ ಪ್ರಾಬಲ್ಯವಿದ್ದು 1998ರಿಂದಲೂ ಇಲ್ಲಿ ಬಿಜೆಡಿ ಅಭ್ಯರ್ಥಿಯೇ ಜಯ ಸಾಧಿಸುತ್ತಾ ಬಂದಿದ್ದಾರೆ. 1996ರಲ್ಲಿ ಮಿಶ್ರಾ ಅವರು ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿ ಪ್ರಧಾನಿ ಮೋದಿ ಅವರು ಪುರಿ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಕೊನೆಗೆ ಬಿಜೆಪಿಯು ವಕ್ತಾರ ಸಂಬಿತ್ ಪಾತ್ರಾಗೆ ಟಿಕೆಟ್ ನೀಡಿತ್ತು.