ಶೀಘ್ರ ಗೋವಾ ಸಂಪುಟ ವಿಸ್ತರಣೆ

Team Udayavani, Jul 12, 2019, 6:00 AM IST

ನವದೆಹಲಿ: ಗೋವಾದಲ್ಲಿ ಕಾಂಗ್ರೆಸ್‌ನ 15 ಶಾಸಕರ ಪೈಕಿ 10 ಶಾಸಕರು ಬಿಜೆಪಿಯೊಂದಿಗೆ ವಿಲೀನಗೊಂಡ ಬೆನ್ನಲ್ಲೇ, ಗುರುವಾರ ಈ ಎಲ್ಲ ಶಾಸಕರೂ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇವರ ಸೇರ್ಪಡೆ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಬಿಜೆಪಿಗೆ ಸೇರಿದ 10 ಶಾಸಕರು ಗುರುವಾರ ಗೋವಾ ಸಿಎಂ ಪ್ರಮೋದ್‌ ಸಾವಂತ್‌ ಅವರೊಂದಿಗೆ ದೆಹಲಿಗೆ ಆಗಮಿಸಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾರನ್ನು ಭೇಟಿ ಮಾಡಿದ್ದಾರೆ. ಇಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ, ಸಿಎಂ ಪ್ರಮೋದ್‌ ಸಾವಂತ್‌ ಅವರು ಸಚಿವ ಸಂಪುಟ ವಿಸ್ತರಣೆ ಕುರಿತು ಅಮಿತ್‌ ಶಾ ಜತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಈ 10 ಶಾಸಕರಿಗೂ ಸಚಿವ ಸ್ಥಾನ ನೀಡುವುದಕ್ಕಾಗಿ ಸಂಪುಟ ವಿಸ್ತರಣೆ ನಡೆಸುವ ಸಾಧ್ಯತೆಯಿದೆ. ಇನ್ನೊಂದೆಡೆ ಸರ್ಕಾರದ ಭಾಗವಾಗಿರುವ ಗೋವಾ ಫಾರ್ವರ್ಡ್‌ ಪಾರ್ಟಿಯ ಕೆಲವು ಸಚಿವರನ್ನು ಕೈಬಿಡಲಾಗುತ್ತದೆ ಎಂದೂ ಹೇಳಲಾಗಿದೆ. ಈ ಬಗ್ಗೆ ಮಾತನಾಡಿದ ಜಿಎಫ್ಪಿ ಅಧ್ಯಕ್ಷ ಹಾಗೂ ಡಿಸಿಎಂ ವಿಜಯ್‌ ಸರದೇಸಾಯಿ, ನಾವು ಒಳ್ಳೆಯ ದಿನಗಳಲ್ಲೂ, ಕೆಟ್ಟ ದಿನಗಳಲ್ಲೂ ಬಿಜೆಪಿಯ ಜೊತೆಗೆ ಇದ್ದೇವೆ ಎಂದಿದ್ದಾರೆ. ಕಾಂಗ್ರೆಸ್‌ ಮೊದಲಿನಿಂದಲೂ ನನಗೆ ಆಹ್ವಾನ ನೀಡುತ್ತಿತ್ತು ಎಂದೂ ಅವರು ಹೇಳಿದ್ದಾರೆ.

ಬಿಜೆಪಿಯ ಹಾದಿ ಬೇರೆಯಾಗಿದೆ: ಬಿಜೆಪಿಯ ಹಾದಿಯು ಮಾರ್ಚ್‌ 17 ರಂದೇ ಬದಲಾಗಿದೆ. ಇದು ಸರಿಯೇ ಅಥವಾ ತಪ್ಪೇ ಎಂಬುದನ್ನು ಕಾಲವೇ ಹೇಳುತ್ತದೆ ಎಂದು ಮಾಜಿ ಸಿಎಂ ಮನೋಹರ ಪರ್ರಿಕರ್‌ ಪುತ್ರ ಉತ್ಪಲ್ ಪರ್ರಿಕರ್‌ ಹೇಳಿದ್ದಾರೆ. ಮನೋಹರ್‌ ಪರ್ರಿಕರ್‌ ನಿಧನದ ನಂತರ ಪಣಜಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದ ಉತ್ಪಲ್ಗೆ ಬಿಜೆಪಿ ಟಿಕೆಟ್ ನೀಡಿರಲಿಲ್ಲ. ಇದೇ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಅಟನಾಸಿಯೋ ಮಾನ್ಸೆರಾಟ್ಟೆ ಈಗ ಬಿಜೆಪಿ ಸೇರಿದ್ದಾರೆ. ಈ ಕುರಿತು ಗುರುವಾರ ಪ್ರತಿಕ್ರಿಯಿಸಿದ ಉತ್ಪಲ್, ನನ್ನ ತಂದೆಯ ಮರಣಾನಂತರ ಬಿಜೆಪಿ ಬೇರೆಯದೇ ದಿಕ್ಕಿನೆಡೆ ನಡೆಯುತ್ತಿದೆ. ವಿಶ್ವಾಸ ಹಾಗೂ ಬದ್ಧತೆಗಳು ಬಿಜೆಪಿಯಲ್ಲಿ ಮಾ.17ರಂದೇ ಕೊನೆಯಾಯಿತು ಎನ್ನುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಕ್ಕಟ್ಟಿನಿಂದ ಆರ್ಥಿಕತೆ ಮೇಲೂ ಪರಿಣಾಮ
ಕರ್ನಾಟಕ, ಗೋವಾ ರಾಜಕೀಯ ಸಂಕಷ್ಟಕ್ಕೆ ಬಿಜೆಪಿಯೇ ಕಾರಣ ಎಂದು ಆರೋಪಿಸಿರುವ ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ, ಇದು ಪ್ರಜಾಸತ್ತೆಗೆ ಗಂಭೀರ ಹಾನಿ ಉಂಟುಮಾಡಿದೆಯಲ್ಲದೆ, ಈ ಬೆಳವಣಿಗೆಗಳಿಂದ ಆರ್ಥಿಕತೆ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂದಿದ್ದಾರೆ. ರಾಜ್ಯಸಭೆಯಲ್ಲಿ ಗುರುವಾರ ಮಾತನಾಡಿದ ಅವರು, ಕರ್ನಾಟಕ ಹಾಗೂ ಗೋವಾದ ಬೆಳವಣಿಗೆಗಳು ಬಿಜೆಪಿಗೆ ತನ್ನ ರಾಜಕೀಯ ಗುರಿಗಳನ್ನು ಸಾಧಿಸಲು ನೆರವಾಗಬಹುದು. ಆದರೆ, ದೇಶದ ಆರ್ಥಿಕ ಗುರಿ ಸಾಧಿಸುವಲ್ಲಿ ತೊಂದರೆ ಉಂಟುಮಾಡುತ್ತದೆ ಎಂದು ಹೇಳಿದ್ದಾರೆ.

ಸಂಸತ್‌ ಆವರಣದಲ್ಲಿ ಕಾಂಗ್ರೆಸ್‌ ಪ್ರತಿಭಟನೆ
ಕರ್ನಾಟಕ ಹಾಗೂ ಗೋವಾದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿಗೆ ಸಂಬಂಧಿಸಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಸೇರಿದಂತೆ ವಿವಿಧ ಪಕ್ಷಗಳ ಸಂಸದರು ಗುರುವಾರ ಸಂಸತ್‌ ಭವನದ ಆವರಣದ ಮುಂದಿನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್‌ ಸಂಸದೀಯ ನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಆನಂದ್‌ ಶರ್ಮಾ ಸೇರಿದಂತೆ ಪಕ್ಷದ ಪ್ರಮುಖರು ‘ಪ್ರಜಾತಂತ್ರ ಉಳಿಸಿ’ ಎಂಬ ಫ‌ಲಕಗಳನ್ನು ಹಿಡಿದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಟಿಎಂಸಿ ನಾಯಕ ಸುದೀಪ್‌ ಬಂಡೋಪಾಧ್ಯಾಯ, ಸಮಾಜವಾದಿ ಪಕ್ಷದ ಅಜಂ ಖಾನ್‌, ಎನ್‌ಸಿಪಿ ನಾಯಕ ಮಜೀದ್‌ ಮೆಮನ್‌, ಆರ್‌ಜೆಡಿಯ ಮನೋಜ್‌ ಜಾ ಹಾಗೂ ಸಿಪಿಐ ನಾಯಕ ಡಿ.ರಾಜಾ ಕೂಡ ಪಾಲ್ಗೊಂಡಿದ್ದರು. ಬಿಜೆಪಿಯು ಭಾರತವನ್ನು ಏಕಪಕ್ಷೀಯ ದೇಶವನ್ನಾಗಿಸಲು ಹೊರಟಿದೆಯೇ ಎಂದು ಸಂಸದ ಶಶಿ ತರೂರ್‌ ಪ್ರಶ್ನಿಸಿದ್ದು, ಇದು ಸಂವಿಧಾನದ ಮೇಲಾಗುತ್ತಿರುವ ಹಲ್ಲೆ ಎಂದು ಕಿಡಿಕಾರಿದ್ದಾರೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ