ಡಿಕೆಶಿ ತಾಯಿ, ಪತ್ನಿಗೆ ಶೀಘ್ರ ಸಮನ್ಸ್
Team Udayavani, Oct 22, 2019, 3:00 AM IST
ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಪತ್ನಿ ಮತ್ತು ತಾಯಿಗೆ ಸದ್ಯದಲ್ಲೇ ಹೊಸದಾಗಿ ಸಮನ್ಸ್ ಜಾರಿಗೊಳಿಸುವುದಾಗಿ ಜಾರಿ ನಿರ್ದೇಶನಾಲಯ ತಿಳಿಸಿದೆ. ಇ.ಡಿ. ಪರವಾಗಿ ವಾದ ಮಂಡಿಸಿದ ಕೇಂದ್ರ ಸರ್ಕಾರದ ವಕೀಲ ಅಮಿತ್ ಮಹಾಜನ್, “ಡಿ.ಕೆ. ಶಿವಕುಮಾರ್ ವಿರುದ್ಧದ ತನಿಖೆ ಇನ್ನೂ ಮುಕ್ತಾಯವಾಗಿಲ್ಲ. ಹಾಗಾಗಿ, ಅವರಿಗೆ ಸಂಬಂಧಿಸಿದವರ ವಿಚಾರಣೆಗೆ ತನಿಖೆ ಅತ್ಯಗತ್ಯ.
ಹಾಗಾಗಿ, ಸದ್ಯದಲ್ಲೇ ಶಿವಕುಮಾರ್ರವರ ತಾಯಿ ಮತ್ತು ಪತ್ನಿಗೆ ಸಮನ್ಸ್ ಜಾರಿಗೊಳಿಸಲಾಗುತ್ತದೆ” ಎಂದರು. ಈ ವಿವರಣೆ ಕೇಳಿದ ನ್ಯಾಯ ಮೂರ್ತಿಗಳು ವಿಚಾರಣೆಯನ್ನು ಅ. 24ಕ್ಕೆ ಮುಂದೂಡಿದರು. ಈ ಮಧ್ಯೆ, ಡಿಕೆಶಿ ಅವರ ದೆಹಲಿ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಕೆಲವು ವಾಹಿನಿ ಗಳಲ್ಲಿ ಸುದ್ದಿ ಪ್ರಸಾರವಾಯಿತು. ಆದರೆ, ಈ ಬಗ್ಗೆ ಸಿಬಿಐ ಅಧಿಕೃತವಾಗಿ ಏನನ್ನೂ ಹೇಳಿಲ್ಲ.