24 ತಾಸು ಟಿವಿಯಲ್ಲಿ ಮೋದಿ, ಉದ್ಯಮಿಗಳಿಂದ ಕೋಟಿಗಟ್ಟಲೆ ಹಣ: ರಾಹುಲ್
Team Udayavani, Oct 9, 2018, 7:03 PM IST
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾರ್ಕೆಟಿಂಗ್‌ಗಾಗಿ ಕೈಗಾರಿಕೋದ್ಯಮಿಗಳಿಗೆ ಕೋಟಿಗಟ್ಟಲೆ ಹಣ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
”ಪ್ರಧಾನಿ ಮೋದಿ ಅವರು ದಿನದ 24 ತಾಸು ಕೂಡ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ; ಎಲ್ಲೆಂದರಲ್ಲಿ ಅವರ ಪೋಸ್ಟರ್‌ಗಳು ಕಂಡು ಬರುತ್ತಿವೆ. ಇವೆಲ್ಲವೂ ಉಚಿತವಾಗಿ ನಡೆಯುತ್ತಿವೆ ಎಂದು ಯಾರೂ ಭಾವಿಸಬಾರದು. ಪ್ರಧಾನಿ ಮೋದಿ ಅವರು ಇವಕ್ಕೆಲ್ಲ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಒಂದೊಮ್ಮೆ ಇವೆಲ್ಲ ಉಚಿತವಾಗಿ ನಡೆಯುವುದಿದ್ದರೆ ಎಲ್ಲರೂ ಟಿವಿಯಲ್ಲಿ ಪುಕ್ಕಟೆಯಾಗಿ ಕಾಣಿಸಿಕೊಳ್ಳಬಹುದಿತ್ತು” ಎಂದು ರಾಹುಲ್ ಗುಡುಗಿದರು.
ರಾಜಸ್ಥಾನದ ಬಾರಿಯಲ್ಲಿ ನಡೆದ ಚುನಾವಣಾ ಪ್ರಚಾರಾಭಿಯಾನದ ಕಾರ್ಯಕ್ರಮದಲ್ಲಿ ರಾಹುಲ್ ಮಾತನಾಡುತ್ತಿದ್ದರು.
”ಪ್ರಧಾನಿ ಮೋದಿ ಅವರು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದುಕೊಂಡು ಮಾಡಿದ್ದೇನು ? ದೇಶದ ಬೊಕ್ಕಸಕ್ಕೆ ಸಾವಿರಗಟ್ಟಲೆ ಕೋಟಿ ರೂ.ಗಳನ್ನು ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿರುವ ನೀರವ್ ಮೋದಿ, ಮೆಹುಲ್ ಚೋಕ್ಸಿ, ವಿಜಯ್ ಮಲ್ಯ, ಲಲಿತ್ ಮೋದಿ ಮೊದಲಾದವರಿಗೆ ನೆರವಾದುದನ್ನು ಬಿಟ್ಟರೆ ಬಡ ರೈತರಿಗೆ ಮತ್ತು ಯುವಕರಿಗಾಗಿ ಮೋದಿ ಮಾಡಿದ್ದೇನೂ ಇಲ್ಲ” ಎಂದು ರಾಹುಲ್ ಕಟುವಾಗಿ ಟೀಕಿಸಿದರು.