ಚೌಕೀದಾರ್ ಚೋರ್ ಹೇಳಿಕೆ; ಸುಪ್ರೀಂನಲ್ಲಿ ವಿಷಾದ ವ್ಯಕ್ತಪಡಿಸಿದ ರಾಹುಲ್ ಗಾಂಧಿ

Team Udayavani, Apr 22, 2019, 1:36 PM IST

ನವದೆಹಲಿ: ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶವನ್ನು ತಮ್ಮ ವೈಯಕ್ತಿಕ ರಾಜಕೀಯ ಟೀಕೆಗೆ ಬಳಸಿಕೊಂಡಿದ್ದ ಪ್ರಕರಣದ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಅಫಿಡವಿತ್ ನಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ.

ರಾಹುಲ್ ಗಾಂಧಿ ಹೇಳಿಕೆ ಕುರಿತು ಸುಪ್ರೀಂಕೋರ್ಟ್ ನಲ್ಲಿ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ, ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆಯಡಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ್ದ ಕೋರ್ಟ್, ರಾಹುಲ್ ಗೆ ನೋಟಿಸ್ ಜಾರಿ ಮಾಡಿ, ಏಪ್ರಿಲ್ 23ಕ್ಕೆ ವಿಚಾರಣೆ ಮುಂದೂಡಿತ್ತು.

ರಫೇಲ್ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಕೂಡಾ ಈಗ ಚೌಕಿದಾರ ಕಳ್ಳ ಎಂಬುದಾಗಿ ಹೇಳಿದೆ. ವಾಯುಪಡೆ ಹಣವನ್ನು ಮೋದಿವರು ಅನಿಲ್ ಅಂಬಾನಿಗೆ ಕೊಟ್ಟಿದ್ದಾರೆ ಎಂದು ನಾನು ಹಲವು ತಿಂಗಳಿಂದ ಹೇಳುತ್ತಾ ಬಂದಿದ್ದೇನೆ. ಈಗ ನಮ್ಮ ವಾದವನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ ಎಂದು ರಾಹುಲ್ ಹೇಳಿದ್ದರು.

ಸೋಮವಾರ ಸುಪ್ರೀಂಕೋರ್ಟ್ ಗೆ ರಾಹುಲ್ ಸಲ್ಲಿಸಿದ್ದ ಅಫಿಡವಿತ್ ನಲ್ಲಿ, ರಾಜಕೀಯ ಪ್ರಚಾರದ ಭರಾಟೆಯಲ್ಲಿ ಈ ಹೇಳಿಕೆ ನೀಡಿದ್ದೇ ವಿನಃ, ಸುಪ್ರೀಂಕೋರ್ಟ್ ಯಾವತ್ತೂ ತನ್ನ ಆದೇಶದಲ್ಲಿ ಈ ಶಬ್ದ ಉಪಯೋಗಿಸಿರಲಿಲ್ಲವಾಗಿತ್ತು. ರಾಜಕೀಯ ವಿರೋಧಿಗಳು ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದು ತಿಳಿಸಿದ್ದರು. ತಾನು ಸುಪ್ರೀಂ ಹೆಸರಿನಲ್ಲಿ ಹೇಳಿಕೆ ನೀಡಿರುವುದಕ್ಕೆ ವಿಷಾದ ವ್ಯಕ್ತಪಡಿಸುವುದಾಗಿಯೂ ರಾಹುಲ್ ಗಾಂಧಿ ಅಫಿಡವಿತ್ ನಲ್ಲಿ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ