ರಾಹುಲ್ ವಿದಾಯ: ಪಕ್ಷದ ಹಿತದೃಷ್ಟಿಯಿಂದ ಗಟ್ಟಿ ನಿರ್ಧಾರ ಅನಿವಾರ್ಯ ಎಂದ ರಾಹುಲ್

ಪಕ್ಷದ ಹಂಗಾಮಿ ಅಧ್ಯಕ್ಷರಾಗಲು ಮೋತಿಲಾಲ್ ವೋರಾಗೆ ಆಹ್ವಾನ

Team Udayavani, Jul 4, 2019, 6:00 AM IST

ಹೊಸದಿಲ್ಲಿ: ಕಳೆದೊಂದು ತಿಂಗಳಿನಿಂದ ನಡೆಯುತ್ತಿದ್ದ ಕಾಂಗ್ರೆಸ್‌ ಅಧ್ಯಕ್ಷರ ಪದತ್ಯಾಗ ಹಗ್ಗಜಗ್ಗಾಟದಲ್ಲಿ ರಾಹುಲ್ ಗಾಂಧಿಯವರೇ ಜಯ ಸಾಧಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ನೈತಿಕ ಹೊಣೆ ಹೊತ್ತು ಕಾಂಗ್ರೆಸ್‌ ಅಧ್ಯಕ್ಷ ಸ್ಥಾನ ತ್ಯಜಿಸುವುದಾಗಿ ಬುಧವಾರ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಹಿರಿಯ ಕಾಂಗ್ರೆಸ್‌ ನಾಯಕ, ಪಕ್ಷದ ಖಜಾಂಚಿಯಾಗಿರುವ ಮೋತಿಲಾಲ್ ವೋರಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿಸಲು ನಿರ್ಧರಿಸಲಾಗಿತ್ತಾದರೂ ಅದನ್ನು ವೋರಾ ನಿರಾಕರಿಸಿದ್ದಾರೆ.

ನಾಲ್ಕು ಪುಟಗಳ ತನ್ನ ರಾಜೀನಾಮೆ ಪತ್ರವನ್ನು ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಗೆ ರವಾನಿಸಿರುವ ರಾಹುಲ್, ‘ಪಕ್ಷದ ಹಿತದ‌ೃಷ್ಟಿಯಿಂದ ಕೆಲವು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಾಗಾಗಿ ತನ್ನ ರಾಜೀನಾಮೆಯನ್ನು ಅಂಗೀಕರಿಸಬೇಕು. ಭವಿಷ್ಯದ ಬೆಳವಣಿಗೆಗಾಗಿ ಕಾಂಗ್ರೆಸ್‌ಗೆ ಸೂಕ್ತವಾದ ನಾಯಕನನ್ನು ಆರಿಸಬೇಕು’ ಎಂದು ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.

ಪತ್ರದಲ್ಲಿ ಭಾವುಕವಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ರಾಹುಲ್, ಕಾಂಗ್ರೆಸ್‌ನಲ್ಲಿ ತನ್ನ ರಾಜೀನಾಮೆ ಹೊಸತೊಂದು ಮನ್ವಂತರಕ್ಕೆ ನಾಂದಿ ಹಾಡಲಿದೆ. ಕಾಂಗ್ರೆಸನ್ನು ಕೆಲವು ವರ್ಷಗಳ ಕಾಲ ಮುನ್ನಡೆಸಿದ್ದಕ್ಕೆ ತನಗೆ ಹೆಮ್ಮೆಯಿದೆ. ದೇಶದ ಕೋಟ್ಯಂತರ ಜನತೆಯ ಪ್ರೀತಿಯನ್ನು ಕಣ್ಣಾರೆ ಅರಿಯುವ ಅವಕಾಶ ಸಿಕ್ಕಿದ್ದು ತನ್ನ ಭಾಗ್ಯ ಎಂದಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷಗಿರಿಗೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ, ತನ್ನ ಟ್ವಿಟರ್‌ ಖಾತೆಯಲ್ಲಿನ ತನ್ನ ಪರಿಚಯ ಪುಟದಲ್ಲಿ ತಾವು ಹಾಕಿಕೊಂಡಿದ್ದ ಕಾಂಗ್ರೆಸ್‌ ಅಧ್ಯಕ್ಷ ಎಂಬುದನ್ನು ತೆಗೆದಿದ್ದಾರೆ.

ಖರ್ಗೆಗೆ ಸ್ಥಾನ?

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕದ ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಮಹಾರಾಷ್ಟ್ರದ ಸುಶೀಲ್ಕುಮಾರ್‌ ಶಿಂಧೆ ಅವರ ಹೆಸರು ಕೇಳಿಬರುತ್ತಿದೆ. ಈ ವರ್ಷಾಂತ್ಯದಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಶಿಂಧೆ ಅವರಿಗೆ ಸಿಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಹೊಸ ಅಧ್ಯಕ್ಷರ ನೇಮಕ ಆಗುವವರೆಗೆ ರಾಹುಲ್ ಗಾಂಧಿ ಅವರೇ ಅಧ್ಯಕ್ಷರಾಗಿ ಮುಂದುವರಿಯುವರು.
ಬಿಜೆಪಿ, ಎನ್‌ಸಿ ಸ್ವಾಗತ
ರಾಹುಲ್ ಗಾಂಧಿಯವರ ರಾಜೀನಾಮೆ ನಿರ್ಧಾರವನ್ನು ಬಿಜೆಪಿ ಸ್ವಾಗತಿಸಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಬಿಜೆಪಿ ಸಂಸದ ರಾಜ್ಯವರ್ಧನ ಸಿಂಗ್‌ ರಾಥೋಡ್‌, ‘ರಾಹುಲ್ ಅವರ ನಿರ್ಧಾರವನ್ನು ಗೌರವಿಸುತ್ತೇನೆ. ದೇಶದ ಜನತೆ ವಂಶಪಾರಂಪರ್ಯ ಆಡಳಿತವನ್ನು ನಿರಾಕರಿಸಿರುವುದನ್ನು ರಾಹುಲ್ ಒಪ್ಪಿಕೊಳ್ಳಬೇಕು’ ಎಂದಿದ್ದಾರೆ. ‘ಸದ್ಯದ ಪರಿಸ್ಥಿತಿ ಅರ್ಥ ಮಾಡಿಕೊಂಡು ಅವರು ಅಧ್ಯಕ್ಷಗಿರಿ ತ್ಯಜಿಸಿದ್ದು ಸಮಯೋಚಿತ ನಿರ್ಧಾರ. ರಾಹುಲ್ ಅವರಿನ್ನೂ ಚಿಕ್ಕವರು’ ಎಂದು ನ್ಯಾಶನಲ್ ಕಾನ್ಫರೆನ್ಸ್‌ ನಾಯಕ ಫಾರೂಕ್‌ ಅಬ್ದುಲ್ಲಾ ತಿಳಿಸಿದ್ದಾರೆ.
ರಾಹುಲ್ ಅವರೇ ನಮ್ಮ ನಾಯಕ
‘ರಾಹುಲ್ ಅಧ್ಯಕ್ಷ ಪದವಿ ತ್ಯಜಿಸಿದ್ದರೂ ಅವರು ಕೋಟ್ಯಂತರ ಕಾಂಗ್ರೆಸ್‌ ಕಾರ್ಯಕರ್ತರ ಧ್ವನಿಯಾಗಿದ್ದಾರೆ’ ಎಂದು ಕೇಂದ್ರದ ಮಾಜಿ ಸಚಿವ ಅಜಯ್‌ ಮಾಕನ್‌ ಹೇಳಿದ್ದಾರೆ. ಪಂಜಾಬ್‌ ಸಿಎಂ ಅಮರೀಂದರ್‌ ಸಿಂಗ್‌ ಮಾತನಾಡಿ, ಇಂಥ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಪಕ್ಷ ಸಂಘಟಿಸಬೇಕೆಂದಿದ್ದಾರೆ.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ