ರೈಲ್ವೇ ಕಾರ್ಯಾಚರಣೆ ಅನುಪಾತ ಶೇ. 98.44; 10 ವರ್ಷಗಳಲ್ಲೇ ಕಳಪೆ ಸಾಧನೆ

Team Udayavani, Dec 2, 2019, 10:15 PM IST

ಹೊಸದಿಲ್ಲಿ: ರೈಲುಗಳ ಕಾರ್ಯಾಚರಣೆ ಅನುಪಾತ 2017-18ರಲ್ಲಿ ಶೇಕಡಾ 98.44 ರಷ್ಟನ್ನು ದಾಖಲಾಗಿದೆ. ಇದು 10 ವರ್ಷಗಳಲ್ಲಿ ಅತ್ಯಂತ ಕಳಪೆ ಸಾಧನೆಯಾಗಿದೆ ಎಂದು ಕಂಟ್ರೋಲರ್‌ ಮತ್ತು ಆಡಿಟರ್‌ ಜನರಲ್‌ (ಸಿಎಜಿ) ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ ವರದಿಯಲ್ಲಿ ತಿಳಿಸಿದೆ.

ಇದು ಪರೋಕ್ಷವಾಗಿ ಭಾರತೀಯ ರೈಲ್ವೇ ನಷ್ಟದಲ್ಲಿದೆ ಎಂದು ಹೇಳಿದೆ. ಆದಾಯ ಮತ್ತು ಖರ್ಚಿನ ನಡುವಿನ ತುಂಬಾ ಅಂತರವಿಲ್ಲದೇ ಇರುವುದನ್ನು ಈ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖೀಸಲಾಗಿದೆ. ಇದು ದೇಶದಲ್ಲಿ ರೈಲ್ವೇ ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತೋರಿಸುತ್ತದೆ. ಈ ವರದಿಯಲ್ಲಿ ಉಲ್ಲೇಖವಾದಂತೆ 98.44 ಎಂದರೆ 100 ರೂ.ಗಳ ಆದಾಯವನ್ನು ಗಳಿಸಬೇಕಾದರೆ ರೈಲ್ವೇಯು 98.44 ರೂ.ಗಳನ್ನು ಖರ್ಚುಮಾಡಬೇಕಾಗಿದೆ.

ಪ್ರಯಾಣಿಕರ ಸೇವೆಗಳು ಮತ್ತು ಇತರ ಕೋಚಿಂಗ್‌ ಸೇವೆಗಳ ನಿರ್ವಹಣಾ ವೆಚ್ಚವನ್ನು ಪೂರೈಸಲು ರೈಲ್ವೇಗೆ ಸಾಧ್ಯವಾಗುತ್ತಿಲ್ಲ. ಪ್ರಯಾಣಿಕರ ಮತ್ತು ಇತರ ಕೋಚಿಂಗ್‌ ಸೇವೆಗಳ ಕಾರ್ಯಾಚರಣೆಯಲ್ಲಿನ ನಷ್ಟವನ್ನು ಸರಿದೂಗಿಸಲು ಸರಕು ಸಾಗಣೆಯಿಂದ ಬರುವ ಲಾಭದ ಸುಮಾರು 95 ಪ್ರತಿಶತವನ್ನು ಇದಕ್ಕೆ ಬಳಸಿಕೊಳ್ಳಲಾಗುತ್ತದೆ. ರೈಲ್ವೇಗಳು ತಮ್ಮ ಆಂತರಿಕ ಆದಾಯವನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ಸಿಎಜಿ ಶಿಫಾರಸು ಮಾಡಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ