ಖಾಸಗಿಯವರಿಗೆ ರೈಲು ಓಡಿಸಲು ಆಹ್ವಾನ; ಪ್ರಯಾಣಿಕರಿಗೆ ಉತ್ತಮ ಸೌಕರ್ಯ, ಸೌಲಭ್ಯ

Team Udayavani, Jun 19, 2019, 3:44 PM IST

ಹೊಸದಿಲ್ಲಿ : ಪ್ರಯಾಣಿಕರಿಗೆ ಉತ್ತಮ ಸೌಲಭ್ಯ, ಸೌಕರ್ಯಗಳನ್ನು ಒದಗಿಸುವ ಸಲುವಾಗಿ ಸರಕಾರ ಕೆಲವೊಂದು ಮಾರ್ಗಗಳಲ್ಲಿ ಖಾಸಗಿಯವರಿಗೆ ರೈಲು ಓಡಿಸಲು ಆಹ್ವಾನಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

ರೈಲ್ವೇ ಸಚಿವಾಲಯವು ಐಆರ್‌ಸಿಟಿಸಿ ಮೂಲಕ ಖಾಸಗಿಯವರಿಗೆ ರೈಲು ಓಡಿಸಲು ಆಹ್ವಾನಿಸಲಿದೆ ಎಂದು ಮೂಲಗಳು ತಿಳಿಸಿವೆ.

ಈ ಯೋಜನೆ ಪ್ರಕಾರ ಭಾರತೀಯ ರೈಲ್ವೇ ಕೆಲವೊಂದು ಮಾರ್ಗಗಳ ರೈಲುಗಳನ್ನು ಐಆರ್‌ಸಿಟಿಸಿ ಗೆ ನೀಡಲಿದೆ. ಐಆರ್‌ಸಿಟಿಸಿ ಅವುಗಳನ್ನು ಖಾಸಗಿಯವರಿಗೆ ಕೊಡಲಿದೆ. ಇದರಿಂದ ತಾನು ಗಳಿಸುವ ಆದಾಯದ ಸ್ವಲ್ಪಾಂಶವನ್ನು ಐಆರ್‌ಸಿಟಿ, ಭಾರತೀಯ ರೈಲ್ವೆಗೆ ಕೊಡಲಿದೆ ಎಂದು ಮೂಲಗಳು ಹೇಳಿವೆ.

ಪ್ರವಾಸೋದ್ಯಮ ತಾಣಗಳನ್ನು ಸಂಪರ್ಕಿಸುವ ರೈಲು ಮಾರ್ಗಗಳಲ್ಲಿ ಖಾಸಗಿಯವರಿಗೆ ರೈಲು ಓಡಿಸುವ ಕೊಡುಗೆಯನ್ನು ಐಆರ್‌ಸಿಟಿಸಿ ಬಿಡ್‌ ಮೂಲಕ ಕೊಡಲಿದೆ.

ಪ್ರಯಾಣಿಕರ ರೈಲು ಮಾತ್ರವಲ್ಲದೆ ಸರಕು ಸಾಗಣೆಯ ರೈಲುಗಳನ್ನು ಕೂಡ ಖಾಸಗಿಯವರ ಭಾಗೀದಾರಿಕೆಯಲ್ಲಿ ಓಡಿಸಲು ನೀಡುವ ಪ್ರಸ್ತಾವವಿದೆ ಎಂದು ಮೂಲಗಳು ತಿಳಿಸಿವೆ.

ಖಾಸಗಿಯವರನ್ನು ಆಹ್ವಾನಿಸುವುದರ ಮುಖ್ಯ ಉದ್ದೇಶ ರೈಲು ಪ್ರಯಾಣಿಕರಿಗೆ ವಿಶ್ವ ಮಟ್ಟದ ಸೌಕರ್ಯ, ಸೌಲಭ್ಯಗಳನ್ನು ಒದಗಿಸುವುದೇ ಆಗಿದೆ; ಜತೆಗೆ ವಾಣಿಜ್ಯ ರೈಲುಗಳ ಒಟ್ಟಾರೆ ಗುಣಮಟ್ಟವನ್ನು ಹೆಚ್ಚಿಸುವುದು ಕೂಡ ಇನ್ನೊಂದು ಮುಖ್ಯ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ