ನಮ್ಮ ಅಭ್ಯರ್ಥಿಗೇ ಆದ್ಯತೆ ನೀಡಬೇಕಿತ್ತು: ಬಿಎಸ್‌ಪಿ
Team Udayavani, Mar 25, 2018, 7:30 AM IST
ಲಕ್ನೋ: ರಾಜ್ಯಸಭೆ ಚುನಾವಣೆ ಯಲ್ಲಿ ಮುಖ ಭಂಗ ಅನುಭವಿಸಿದ ಬೆನ್ನಲ್ಲೇ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹಾಗೂ ಎಸ್‌ಪಿ ನಾಯಕ ಅಖೀಲೇಶ್ ಯಾದವ್ ನಡುವೆ ಸ್ವಲ್ಪ ಮಟ್ಟಿಗೆ ಬಿರುಕು ಕಾಣಿಸಿಕೊಂಡಿದೆ.
ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿಯನ್ನು ರಾಜ್ಯಸಭೆಗೆ ಆಯ್ಕೆ ಮಾಡಲು ಎಸ್‌ಪಿ ಬೆಂಬಲ ನೀಡಿತ್ತು. ಆದರೆ ಎಸ್‌ಪಿ ಮುಖಂಡರು ವ್ಯಾಪಕವಾಗಿ ಅಡ್ಡ ಮತದಾನ ಮಾಡಿದ್ದರಿಂದ ಐದು ಮತಗಳ ಕೊರತೆಯಿಂದಾಗಿ ಬಿಎಸ್‌ಪಿ ಅಭ್ಯರ್ಥಿ ಭೀಮರಾವ್ ಅಂಬೇಡ್ಕರ್ ಸೋಲುಂಡಿದ್ದರು. ಈ ಬಗ್ಗೆ ಮಾತಾಡಿದ ಮಾಯಾವತಿ, ನಾನು ಅಖೀಲೇಶ್ ಸ್ಥಾನದಲ್ಲಿದ್ದರೆ ಬಿಎಸ್‌ಪಿ ಅಭ್ಯರ್ಥಿಗೆ ಮೊದಲ ಆದ್ಯತೆ ನೀಡುತ್ತಿದ್ದೆ ಎಂದಿದ್ದಾರೆ. ಆದರೆ ಈ ಚುನಾವಣೆಯಿಂದ ಎರಡೂ ಪಕ್ಷಗಳ ಸಂಬಂಧಕ್ಕೆ ಧಕ್ಕೆ ಉಂಟಾಗು ವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಗೋರಖ್‌ಪುರ ಮತ್ತು ಫೂಲ್ಪುರದ ಲೋಕಸಭೆ ಉಪ ಚುನಾವಣೆ ಯಲ್ಲಿ ಬಿಜೆಪಿ ಸೋಲಿಸಲು ಎಸ್‌ಪಿಗೆ ಬಿಎಸ್ಪಿ ಬೆಂಬಲ ನೀಡಿತ್ತು. ಆಗ ರಾಜ್ಯಸಭೆ ಚುನಾವಣೆಯಲ್ಲಿ ಒಂದು ಸೀಟು ಆಯ್ಕೆಗೆ ಬಿಎಸ್ಪಿಗೆ ಬೆಂಬಲ ನೀಡುವ ಭರವಸೆಯನ್ನು ಎಸ್‌ಪಿ ನೀಡಿತ್ತು. ಆದರೆ ಈಗ ಅದು ಸಾಧ್ಯವಾಗದ್ದಕ್ಕೆ ಮಾಯಾವತಿ ಸಂಬಂಧ ಮುರಿದುಕೊಳ್ಳುತ್ತಾರೆ ಎಂದು ಊಹಾಪೋಹ ಹಬ್ಬಿತ್ತು. ಆದರೆ ಎರಡೂ ಪಕ್ಷಗಳ ಸಂಬಂಧ ಇದರಿಂದ ಹಾಳಾಗದು ಎಂದು ಮಾಯಾ ಹೇಳಿದ್ದು, ಇದು ಮಹತ್ವ ಪಡೆದಿದೆ.
ಸಂಭ್ರಮಾಚರಣೆ ರದ್ದು: ಬಿಎಸ್ಪಿ ಅಭ್ಯರ್ಥಿ ಗೆಲ್ಲಿಸಲಾಗದ್ದಕ್ಕೆ ಸಮಾಜವಾದಿ ಪಕ್ಷ , ತನ್ನ ಅಭ್ಯರ್ಥಿ ಜಯಾ ಬಚ್ಚನ್ ಗೆಲುವಿನ ಸಂಭ್ರಮಾಚರಣೆ ರದ್ದುಗೊಳಿಸಿದೆ. ಕಾರ್ಯ ಕ್ರಮಕ್ಕೆ ಅಖೀಲೇಶ್ ಸೇರಿ ಪಕ್ಷದ ಮುಖಂಡರು ಹಾಜರಾಗಬೇಕಿತ್ತು. ಆದರೆ ಇದು ಬಿಎಸ್‌ಪಿಗೆ ಮುಜುಗರ ಉಂಟಾಗಬಹುದಾದ ಹಿನ್ನೆಲೆ ಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಮಧ್ಯೆ ಅಡ್ಡ ಮತದಾನ ಮಾಡಿದ ಸ್ವತಂತ್ರ ಶಾಸಕ ರಾಜಾ ಭೈಯ್ನಾಗೆ ವಂದನೆ ತಿಳಿಸಿ ಟ್ವೀಟ್ ಮಾಡಿದ್ದ ಅಖೀಲೇಶ್, ಅನಂತರ ತಪ್ಪಿನ ಅರಿವಾಗಿ ಟ್ವೀಟ್ ಅಳಿಸಿದ್ದಾರೆ.