ಕೋವಿಡ್ ತ್ಯಾಜ್ಯದಿಂದ ಇಟ್ಟಿಗೆ: ಅಹಮದಾಬಾದ್ ಯುವಕನಿಂದ ಹೊಸ ಆವಿಷ್ಕಾರ
Team Udayavani, Aug 18, 2020, 6:00 AM IST
ಅಹಮದಾಬಾದ್/ಕೌಲಾಲಂಪುರ: ಗುಜರಾತ್‌ನಲ್ಲಿ ರೀಸೈಕಲ್ ಮ್ಯಾನ್ ಎಂದೇ ಕರೆಯಲ್ಪಡುವ ಬಿನಿಶ್ ದೇಸಾಯಿ (27) ಎಂಬ ಯುವಕ, ಕೋವಿಡ್ ತ್ಯಾಜ್ಯಗಳಾದ ಪಿಪಿಇ ಕಿಟ್, ಬಳಸಿ ಬಿಸಾಡಿದ ಮಾಸ್ಕ್ ಗಳು, ಗ್ಲೌಸ್‌ಗಳು ಹಾಗೂ ಸ್ಯಾನಿಟರಿ ಖಾಲಿ ಬಾಟಲಿಗಳನ್ನು ಬಳಸಿ ಇಟ್ಟಿಗೆಗಳನ್ನು ತಯಾರಿಸುವ ಹೊಸ ವಿಧಾನವನ್ನು ಆವಿಷ್ಕರಿಸಿದ್ದಾರೆ. ಈ ಮೂಲಕ, ದೇಶಾದ್ಯಂತ ದಿನಕ್ಕೆ ರಾಶಿರಾಶಿಯಾಗಿ ಬೀಳಬಹುದಾದ ಕೋವಿಡ್ ತ್ಯಾಜ್ಯಕ್ಕೆ ಮುಕ್ತಿ ನೀಡುವ ಹಾದಿ ತೋರಿಸಿಕೊಟ್ಟಿದ್ದಾರೆ.
“ಕೋವಿಡ್ ತ್ಯಾಜ್ಯಗಳಿಂದ ಇಟ್ಟಿಗೆ ತಯಾರಿಸುವ ಬಗ್ಗೆ ಎಪ್ರಿಲ್‌ನಿಂದಲೇ ಪ್ರಯೋಗಗಳಿಗೆ ಇಳಿದದ್ದು ಈಗ ಅದು ಫಲಕೊಟ್ಟಿದೆ. ಮೊದಲು ನನ್ನ ಮನೆಯಲ್ಲಿನ ಪುಟ್ಟ ಲ್ಯಾಬ್‌ನಲ್ಲಿ ಈ ಇಟ್ಟಿಗೆಗಳನ್ನು ಸಣ್ಣ ಪ್ರಮಾಣದಲ್ಲಿ ಸಿದ್ಧಗೊಳಿಸಿ, ಆನಂತರ ನನ್ನ ಇಟ್ಟಿಗೆ ಭಟ್ಟಿಯಲ್ಲಿ ಸಾಕಷ್ಟು ಸಂಖ್ಯೆಯ ಇಟ್ಟಿಗೆಗಳನ್ನು ತಯಾರಿಸಿದ್ದೇನೆ. ಕೋವಿಡ್ ತ್ಯಾಜ್ಯಗಳಿಂದ ಬಳಸಲಾದ ಇಟ್ಟಿಗೆಗಳು ದೀರ್ಘಬಾಳಿಕೆ ಬರುವಂಥವಾಗಿದ್ದು, ಸಾಮಾನ್ಯ ಇಟ್ಟಿಗೆಗಳಿಗಿಂತ ಹಗುರವಾಗಿವೆ ಎಂದು ಹೇಳಲಾಗಿದೆ.
ಸ್ಥಳೀಯ ಲ್ಯಾಬೋರೇಟರಿಯೊಂದರಿಂದ ಹೊಸ ಇಟ್ಟಿಗೆಗಳ ಗುಣ ಮಟ್ಟದ ಬಗ್ಗೆ ಪ್ರಮಾಣ ಪತ್ರ ಪಡೆಯಲಾಗಿದೆ. ರಾಷ್ಟ್ರ ಮಟ್ಟದ ಪ್ರಯೋಗಾಲಯಗಳಿಗೂ ಇಟ್ಟಿಗೆಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಅಲ್ಲಿಂದಲೂ ಪ್ರಮಾಣ ಪತ್ರ ಸಿಗುವ ಸಾಧ್ಯತೆಗಳಿವೆ. ಅದು ಲಭ್ಯವಾದರೆ ಇದೇ ಸೆಪ್ಟಂಬರ್‌ನಿಂದ ಹೇರಳ ಪ್ರಮಾಣದಲ್ಲಿ ಇಟ್ಟಿಗೆ ಉತ್ಪಾದನೆ ಶುರುವಾಗಬಹುದು’ ಎಂದು ಬಿನಿಶ್ ತಿಳಿಸಿದ್ದಾರೆ.