ಕೆಬಿಸಿಗೆ ನೋಂದಣಿ ಮೇ 1ರಿಂದ
Team Udayavani, Apr 17, 2019, 6:00 AM IST
ಮುಂಬಯಿ: ಹಿಂದಿಯ ಜನಪ್ರಿಯ ಟಿವಿ ಶೋ ಆದ “ಕೌನ್ ಬನೇಗಾ ಕರೋಡ್ಪತಿ’ಯ (ಕೆಬಿಸಿ) 11ನೇ ಸಂಚಿಕೆ ಮೇ ತಿಂಗಳಿನಿಂದ ಆರಂಭಗೊಳ್ಳಲಿದೆ ಎಂದು ಆ ಕಾರ್ಯಕ್ರಮ ಪ್ರಸಾರವಾಗುವ ಸೋನಿ ವಾಹಿನಿ ಪ್ರಕಟಿಸಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವವರ ನೋಂದಣಿ ಮೇ 1ರ ರಾತ್ರಿ 9ರಿಂದ ಆರಂಭಗೊಳ್ಳಲಿದೆ. ಇದರ ಪ್ರಚಾರ ತಂತ್ರವಾಗಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಕಾರ್ಯಕ್ರಮದ ನಿರೂಪಕ, ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್, ಕಾರ್ಯಕ್ರಮದಲ್ಲಿ ತಪ್ಪದೇ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ವೀಕ್ಷಕರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ, ಸತತವಾಗಿ ಪ್ರಯತ್ನ ಪಟ್ಟಲ್ಲಿ “ಕೆಬಿಸಿ’ಯ ಹಾಟ್ ಸೀಟ್ನಲ್ಲಿ ಕೂರುವ ಅವಕಾಶ ನಿಮ್ಮದಾಗಬಹುದು ಎಂದೂ ಹುರಿದುಂಬಿಸಿದ್ದಾರೆ. 2000ರಲ್ಲಿ ಶುರುವಾದ ಈ ಕಾರ್ಯಕ್ರಮ ಇಂದಿಗೂ ಅದೇ ಜನ ಪ್ರಿಯತೆಯನ್ನು ಉಳಿಸಿಕೊಂಡು ಮುನ್ನುಗ್ಗುತ್ತಿರುವುದು ವಿಶೇಷವಾಗಿದೆ.