ರಾಬರ್ಟ್‌ ವಾದ್ರಾಗೆ ಪಿಲಾಟಸ್‌ ಉರುಳು?

ಶಸ್ತ್ರಾಸ್ತ್ರ ವ್ಯಾಪಾರಿ ಭಂಡಾರಿ ವಿರುದ್ಧ ಕೇಸು

Team Udayavani, Jun 23, 2019, 6:00 AM IST

ನವದೆಹಲಿ: ಯುಪಿಎ ಅವಧಿಯಲ್ಲಿ ನಡೆದಿದ್ದ ಮತ್ತೂಂದು ರಕ್ಷಣಾ ಖರೀದಿ ಹಗರಣದಲ್ಲಿ ಸಿಬಿಐ ಕೇಸು ದಾಖಲಿಸಿದೆ. ಐಎಫ್ ಗೆ ತರಬೇತಿಗಾಗಿ ನೀಡಲಾಗುವ ಪಿಲಾಟಸ್‌ ಪಿಸಿ 7 ವಿಮಾನ ಖರೀದಿಯ 2,895 ಕೋಟಿ ರೂ. ಮೊತ್ತದ ಡೀಲ್‌ ನಲ್ಲಿ ಅವ್ಯವಹಾರ ಆಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಪತಿ ರಾಬರ್ಟ್‌ ವಾದ್ರಾ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

ಕೇಂದ್ರ ತನಿಖಾ ಸಂಸ್ಥೆ ಸಿಬಿಐ ನಡೆಸಿರುವ ತನಿಖೆಯಲ್ಲಿ ವಾದ್ರಾ ಹೆಸರು ಪ್ರಸ್ತಾಪವಾಗದೇ ಇದ್ದರೂ, ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ ಭಂಡಾರಿಗೆ ಸಂದಾಯವಾಗಿರುವ 339 ಕೋಟಿ ರೂ. ಲಂಚದ ಹಣದಲ್ಲಿ ವಾದ್ರಾ ಲಂಡನ್‌ನಲ್ಲಿ ಅಕ್ರಮವಾಗಿ ಆಸ್ತಿ ಖರೀದಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಲಂಡನ್‌ನಲ್ಲಿ ಅಕ್ರಮ ಆಸ್ತಿ ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ್ರಾರನ್ನು ಜಾರಿ ನಿರ್ದೇಶನಾಲಯ (ಇ.ಡಿ) ವಿಚಾರಣೆಗೆ ಒಳಪಡಿಸಿದ್ದ ಸಂದರ್ಭದಲ್ಲಿ ಈ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಲಾಗಿತ್ತು ಎಂದು ಮೂಲಗಳನ್ನು ಉಲ್ಲೇಖೀಸಿ ‘ಇಂಡಿಯಾ ಟುಡೇ’ ವರದಿ ಮಾಡಿದೆ.

ಇಮೇಲ್ ಮಾಹಿತಿ: ಲಂಡನ್‌ನಲ್ಲಿರುವ ಆಸ್ತಿ ಖರೀದಿಗೆ ಸಂಬಂಧಿಸಿದಂತೆ ರಾಬರ್ಟ್‌ ವಾದ್ರಾ ಮತ್ತು ಮನೋಜ್‌ ಅರೋರಾ ಎಂಬುವರು ಆಸಕ್ತಿ ತೋರಿಸಿದ್ದಾರೆ ಎಂದು ಸಂಜಯ ಭಂಡಾರಿ ಮತ್ತು ಲಂಡನ್‌ನಲ್ಲಿರುವ ಸಂಜಯ್‌ ಸಂಬಂಧಿ ಸುಮಿತ್‌ ಛಡ್ಡಾ ನಡುವೆ ಇ-ಮೇಲ್ನಲ್ಲಿ ಮಾಹಿತಿ ಕೂಡ ವಿನಿಮಯವಾಗಿತ್ತು. ಜತೆಗೆ ಆಸ್ತಿಯ ವಿವರ ಕೂಡ ಪಡೆದುಕೊಳ್ಳಲಾಗಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಯುಪಡೆ ಮತ್ತು ರಕ್ಷಣಾ ಸಚಿವಾಲಯದ ಅನಾಮಧೇಯ ಅಧಿಕಾರಿಗಳ ವಿರುದ್ಧ ಹಾಗೂ ಪ್ರಧಾನವಾಗಿ ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ ಭಂಡಾರಿ ಮತ್ತು ಪಿಲಾಟಸ್‌ ಕಂಪನಿ ವಿರುದ್ಧ ಸಿಬಿಐ ಶನಿವಾರ ಕೇಸು ದಾಖಲಿಸಿದೆ.

ಮೂರು ವರ್ಷಗಳ ತನಿಖೆಯ ಬಳಿಕ 2012 ಮೇ 24ರಂದು ಸಹಿ ಹಾಕಲಾಗಿರುವ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ದೃಢಪಡಿಸಿ ಕೇಂದ್ರ ತನಿಖಾ ಸಂಸ್ಥೆ ಈ ಕ್ರಮ ಕೈಗೊಂಡಿದೆ. ಜತೆಗೆ ಒಂಭತ್ತು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಯನ್ನೂ ನಡೆಸಲಾಗಿದೆ.

ಡೀಲ್ ಮತ್ತು ಆರೋಪವೇನು?: ಐಎಎಫ್ ಸಿಬ್ಬಂದಿಗೆ ತರಬೇತಿ ನೀಡುವ ನಿಟ್ಟಿನಲ್ಲಿ 75 ತರಬೇತಿ ವಿಮಾನ ಖರೀದಿಗೆ 2009ರಲ್ಲಿ ಸಿದ್ಧತೆ ನಡೆದಿತ್ತು. ಅದಕ್ಕಾಗಿ ಸ್ವಿಜರ್ಲೆಂಡ್‌ನ‌ ಪಿಲಾಟಸ್‌ ಏರ್‌ಕ್ರಾಫ್ಟ್ ಲಿಮಿಟೆಡ್‌ ಕೂಡ ಬಿಡ್‌ ಮಾಡಿತ್ತು. ಸಂಜಯ ಭಂಡಾರಿ ಮತ್ತು ಬಿಮಲ್ ಸರೀನ್‌ ನಿರ್ದೇಶಕರಾಗಿರುವ ಆಫ್ಸೆಟ್ ಇಂಡಿಯಾ ಸೊಲ್ಯೂಷನ್ಸ್‌ ಪ್ರೈವೇಟ್ ಲಿಮಿಟೆಡ್‌ ಜತೆ ಪಿಲಾಟಸ್‌ ಏರ್‌ಕ್ರಾಫ್ಟ್ ಲಿಮಿಟೆಡ್‌ 2010ರ ಜೂನ್‌ನಲ್ಲಿ ವಿಮಾನ ಪೂರೈಕೆ ನಿಟ್ಟಿನಲ್ಲಿ ರಕ್ಷಣಾ ಖರೀದಿ ನಿಯಮಗಳನ್ನು ಉಲ್ಲಂಘಿಸಿ ಒಪ್ಪಂದಕ್ಕೆ ಸಹಿ ಹಾಕಿತ್ತು.

ಈ ಉದ್ದೇಶಕ್ಕಾಗಿ ನವದೆಹಲಿಯಲ್ಲಿರುವ ಖಾಸಗಿ ಬ್ಯಾಂಕ್‌ನಲ್ಲಿರುವ ಆಫ್ಸೆಟ್ ಇಂಡಿಯಾ ಸೊಲ್ಯೂಷನ್ಸ್‌ ಪ್ರೈ.ಲಿ.ನ ಖಾತೆಗೆ 10 ಲಕ್ಷ ಕೀನ್ಯಾ ಶಿಲ್ಲಿಂಗ್‌ ಕರೆನ್ಸಿ ಮೂಲಕ ಪಾವತಿ ಮಾಡಲಾಗಿತ್ತು. ಈ ಮೊತ್ತಕ್ಕೆ ಹೆಚ್ಚುವರಿಯಾಗಿ 350 ಕೋಟಿ ರೂ. ಮೊತ್ತವನ್ನು ಸ್ವಿಸ್‌ ಫ್ರಾಂಕ್‌ ಮೂಲಕ ಸಂಜಯ ಭಂಡಾರಿ ದುಬೈನಲ್ಲಿ ಹೊಂದಿರುವ ಖಾತೆಗೆ ವರ್ಗಾಯಿಸಲಾಗಿತ್ತು. 2011 ರಿಂದ 2015ರ ನಡುವೆ ಈ ಹಣ ವರ್ಗಾವಣೆ ನಡೆದಿತ್ತು.

ಸಂಜಯ ಭಂಡಾರಿ ಮತ್ತು ಬಿಮಲ್ ಸರೀನ್‌ ಜತೆಗೆ ಮಾಡಿಕೊಂಡಿರುವ ಒಪ್ಪಂದದ ವಿವರ ಮುಚ್ಚಿಟ್ಟು 2010ರ ನ.12ರಂದು ರಕ್ಷಣಾ ಸಚಿವಾಲಯದ ಜತೆಗೆ ವಿಮಾನ ಪೂರೈಕೆಗೆ ಪಿಲಾಟಸ್‌ ಏರ್‌ಕ್ರಾಫ್ಟ್ ಲಿ. ಒಪ್ಪಂದಕ್ಕೆ ಸಹಿ ಹಾಕಿತು ಎಂದು ಸಿಬಿಐ ಆರೋಪಿಸಿದೆ. ಜತೆಗೆ ಭಂಡಾರಿ ದುಬೈ ಮತ್ತು ಭಾರತದಲ್ಲಿ ಹೊಂದಿರುವ ಕಂಪನಿಗಳಿಗೆ ಪಾವತಿ ಮಾಡಿರುವ ಬಗ್ಗೆ ದಾಖಲೆಗಳೂ ಇವೆ ಎಂದಿದೆ. 2012ರ ಮೇ 24ರಂದು ಕಂಪನಿಗೆ 2,895.63 ಕೋಟಿ ರೂ. ಮೊತ್ತದ ಡೀಲ್ ಸಿಕ್ಕಿತ್ತು.

ಪತ್ನಿಗೂ ಸಂದಾಯ: ಸಿಬಿಐ ಆರೋಪ ಮಾಡಿರುವಂತೆ ‘ಸಂಜಯ ಭಂಡಾರಿ ಮತ್ತು ಆತನ ಪತ್ನಿ ಸೋನಿಯಾ ಭಂಡಾರಿಗೆ 2012 ಜೂನ್‌ನಿಂದ 2015ರ ಮಾರ್ಚ್‌ ವರೆಗೆ 25.5 ಕೋಟಿ ರೂ. ಸಂದಾಯವಾಗಿತ್ತು.

ಹಲವಾರು ಕಂಪನಿಗಳ ಖರೀದಿ ಮಾಡುವ ಮೂಲಕ ಮತ್ತು ದೀಪಕ್‌ ಅಗರ್ವಾಲ್ ಹಾಗೂ ಹಿಮಾಂಶು ಶರ್ಮಾ ಎಂಬುವರ ಮೂಲಕ ನಗದು ವಹಿವಾಟು ಮಾಡಿ ಹಣ ವರ್ಗಾಯಿಸಿಕೊಂಡಿದ್ದಾರೆ ಎನ್ನುವುದು ಸಿಬಿಐ ತನ್ನ ತನಿಖೆಯಲ್ಲಿ ಕಂಡುಕೊಂಡಿದೆ. ಈ ಎಲ್ಲರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ಏನಿದು ಪಿಲಾಟಸ್‌?
ಐಎಫ್ ಗೆ ಸಿಬ್ಬಂದಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ವಿಮಾನಗಳ ಖರೀದಿಗೆ ಸಿದ್ಧತೆ ನಡೆಯುತ್ತಿತ್ತು. ಅದಕ್ಕಾಗಿ 2009ರಲ್ಲಿ ಬಿಡ್‌ ಆಹ್ವಾನಿಸಿದ್ದಾಗ ಸ್ವಿಜರ್ಲೆಂಡ್‌ನ‌ ಪಿಲಾಟಸ್‌ ಏರ್‌ಕ್ರಾಫ್ಟ್ ಲಿಮಿಟೆಡ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿತ್ತು. ಅದು ಪೂರೈಸಲು ಮುಂದಾಗಿದ್ದ ಪಿಸಿ-7 ಮಾದರಿಯ ವಿಮಾನ ರಾತ್ರಿ ವೇಳೆ ಹಾರಾಟ ನಡೆಸುವ, ಏರೋಬ್ಯಾಟಿಕ್ಸ್‌ ವ್ಯವಸ್ಥೆ ಹೊಂದಿತ್ತು. ಜತೆಗೆ ತರಬೇತಿಗೆ ಅಗತ್ಯವಾಗಿರುವ ಎಲ್ಲಾ ಅರ್ಹತೆಗಳನ್ನು ಹೊಂದಿತ್ತು. ಪಿಸಿ-7 ವಿಮಾನ ಪಿಲಾಟಸ್‌-3ರ ಮೇಲ್ದರ್ಜೆಗೆ ಏರಿಸಿದ ಆವೃತ್ತಿಯ ವಿಮಾನ. ಹಗರಣ ಬಹಿರಂಗವಾದ ಬಳಿಕ ಐಎಎಫ್ 38 ವಿಮಾನಗಳ ಖರೀದಿಗೆ ನೀಡಿದ್ದ ಆಹ್ವಾನವನ್ನು ತಡೆಹಿಡಿದಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ