ವಿಕ್ರಮ್ ಕೊಠಾರಿ ಸಾಲ ವಂಚನೆ ಅಂದಾಜು 3,695 ಕೋಟಿ : ಸಿಬಿಐ
Team Udayavani, Feb 19, 2018, 7:13 PM IST
ಹೊಸದಿಲ್ಲಿ : ರೋಟೋಮ್ಯಾಕ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಪ್ರಮೋಟರ್ಗಳ ವಿರುದ್ಧದ ಬಹು ಕೋಟಿ ಹಗರಣದ ತನಿಖೆಯ ಉದ್ದ ಅಗಲ ಆಳವನ್ನು ವಿಸ್ತರಿಸಿರುವ ಸಿಬಿಐ, ರೋಟೋಮ್ಯಾಕ್ ಕಂಪೆನಿಯಿಂದ ಆಗಿರುವ ಸಾಲ ವಂಚನೆಯನ್ನು 3,695 ಕೋಟಿ ರೂ.ಗಳೆಂದು ಅಂದಾಜಿಸಿದೆ.
ರೋಟೋಮ್ಯಾಟಿಕ್ ಪೆನ್ ಕಂಪೆನಿಯ ಮುಖ್ಯಸ್ಥ ವಿಕ್ರಂ ಕೊಠಾರಿ, ಅವರ ಪತ್ನಿ ಮತ್ತು ಪುತ್ರನಿಂದ ಬ್ಯಾಂಕುಗಳಿಗೆ ಬಾಕಿ ಇರುವ ಸಾಲದ ಕುರಿತು ವ್ಯಾಪಕ ತನಿಖೆ ಕೈಗೊಂಡಿರುವ ಸಿಬಿಐ ಇಂದು ಕಾನ್ಪುರದಲ್ಲಿನ ಕಂಪೆನಿಯ ಹಲವು ತಾಣಗಳ ಮೇಲೆ ದಾಳಿ ನಡೆಸಿ ಎಫ್ಐಆ ದಾಖಲಿಸಿದೆ.
ಕೊಠಾರಿ, ಪತ್ನಿ ಮತ್ತು ಪುತ್ರ ಮಾತ್ರವಲ್ಲದೆ ಸಿಬಿಐ, ಗುರುತಿಸಲ್ಪಡದ ಕೆಲವು ಬ್ಯಾಂಕ್ ಅಧಿಕಾರಿಗಳ ವಿರುದ್ಧವೂ ಕೇಸು ದಾಖಲಿಸಿಕೊಂಡಿದೆ.
ಮೊದಲಲ್ಲಿ ಕೊಠಾರಿ ಮತ್ತು ಅವರ ಕಂಪೆನಿಯಿಂದ ಬ್ಯಾಂಕುಗಳಿಗೆ ಬಾಕಿ ಇರುವ ಸಾಲದ ಮೊತ್ತ 800 ಕೋಟಿ ರೂ.ಗಳೆಂದು ಅಂದಾಜಿಸಲಾಗಿತ್ತು. ಆದರೆ ಏಳು ಬ್ಯಾಂಕುಗಳನ್ನು ಒಳಗೊಂಡ ಕೂಟಕ್ಕೆ ಕೊಠಾರಿ ಹಾಕಿರುವ ಪಂಗನಾಮ 2,919 ಕೋಟಿ ರೂ.ಗಳೆಂದು ಬ್ಯಾಂಕ್ ಆಫ್ ಬರೋಡ ಕೊಟ್ಟ ದೂರಿನ ಪ್ರಕಾರ ಸಿಬಿಐ ಒಟ್ಟು ಬಾಕಿ ಸಾಲ ಮೊತ್ತವನ್ನು 3,695 ಕೋಟಿ ರೂ.ಗಳೆಂದು ಅಂದಾಜಿಸಿದೆ ಎಂದು ಎಎನ್ಐ ವರದಿ ಮಾಡಿದೆ.