ಬಯಲು ಶೌಚ ಮುಕ್ತ ರಾಷ್ಟ್ರ: ಪ್ರಧಾನಿ ನರೇಂದ್ರ ವಿಧ್ಯುಕ್ತ ಘೋಷಣೆ

Team Udayavani, Oct 3, 2019, 6:20 AM IST

ಅಹಮದಾಬಾದ್‌: ಮಹಾತ್ಮಾ ಗಾಂಧಿ ಅವರ 150ನೇ ಜಯಂತಿ ಹಿನ್ನೆಲೆಯಲ್ಲಿ ಭಾರತವನ್ನು ಬಯಲು ಶೌಚ ಮುಕ್ತ ದೇಶ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಈ ಕುರಿತು ಸಬರಮತಿ ಆಶ್ರಮದಲ್ಲಿರುವ ಸಂದರ್ಶಕರ ಪುಸ್ತಕದಲ್ಲಿ ಪ್ರಧಾನಿ ಬರೆಯುವ ಮೂಲಕ ಘೋಷಿಸಿದ್ದಾರೆ.

ಮಹಾತ್ಮಾಗಾಂಧಿಯವರ 150ನೇ ಜಯಂತಿಯಂದು ಅವರ ಸ್ವತ್ಛ ಭಾರತದ ಕನಸನ್ನು ನನಸಾಗಿಸಿರುವುದು ನಮಗೆ ಖುಷಿ ನೀಡಿದೆ. ದೇಶವನ್ನು ಸಂಪೂರ್ಣವಾಗಿ ಬಯಲು ಶೌಚಮುಕ್ತ ಎಂದು ಆಶ್ರಮದಲ್ಲಿ ಘೋಷಿ ಸುತ್ತಿರುವುದು ನನ್ನ ಅದೃಷ್ಟ ಎಂದು ನಾನು ಭಾವಿಸುತ್ತೇನೆ ಎಂದು ಅವರು ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದಾರೆ.

ಇದೇ ವೇಳೆ ಸಬರಮತಿ ಆಶ್ರಮದಲ್ಲಿ ನಡೆದ ಸ್ವಚ್ಛ ಭಾರತ ದಿವಸ್‌ ಕಾರ್ಯಕ್ರಮದಲ್ಲೂ ಅವರು ಭಾಗವಹಿಸಿದರು. ಅಲ್ಲದೆ, ಗಾಂಧಿ ಸ್ಮರಣೆಗಾಗಿ 150 ರೂ. ನಾಣ್ಯವನ್ನು ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವೇ ದಿನಗಳ ಹಿಂದೆ ವಿಶ್ವಸಂಸ್ಥೆಯು ಗಾಂಧಿ ನೆನಪಿಗೆ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ್ದು, ಭಾರತ ಕೂಡ ಇಂದು ಅಂಚೆ ಚೀಟಿ ಮತ್ತು ನಾಣ್ಯಗಳನ್ನು ಬಿಡುಗಡೆ ಮಾಡುತ್ತಿದೆ ಎಂದರು. 5 ವರ್ಷಗಳ ಹಿಂದೆ ಸ್ವತ್ಛತೆಯ ಬಗ್ಗೆ ನಾನು ಕೆಂಪು ಕೋಟೆಯಲ್ಲಿ ಮಾತನಾಡಿದಾಗ ನಮ್ಮ ಬಳಿ ಜನರ ವಿಶ್ವಾಸ ಮತ್ತು ಬಾಪು ಸಂದೇಶ ಮಾತ್ರ ಇತ್ತು. ಈ ಧ್ಯೇಯವನ್ನಿಟ್ಟುಕೊಂಡು ನಾವೆಲ್ಲರೂ ಪೊರಕೆ ಹಿಡಿದಿದ್ದೆವು ಎಂದರು.

ಹಿರಿಮೆ ವೃದ್ಧಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು ಹಾಗೂ ಹಿರಿಮೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. “ಹ್ಯೂಸ್ಟನ್‌ ಕಾರ್ಯಕ್ರಮದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾಗವಹಿಸಿದ್ದು ಮಹತ್ವದ ವಿಚಾರ. ಒಳಾಂಗಣ ಕ್ರೀಡಾಂಗಣದಲ್ಲಿ ಒಟ್ಟಿಗೆ ಓಡಾಡಲು ಕೋರಿಕೊಂಡಾಗ ಟ್ರಂಪ್‌, ಭದ್ರತೆಯ ಚಿಂತೆಯನ್ನು ಬದಿಗಿಟ್ಟು ನನ್ನ ಜತೆಗೆ ಓಡಾಡಿದರು. ಇದೆಲ್ಲವೂ ಭಾರತದ ವಿಶ್ವದಲ್ಲಿ ಹೆಚ್ಚುತ್ತಿರುವ ಗೌರವವನ್ನು ಸೂಚಿಸುತ್ತದೆ’ ಎಂದರು.

47ರಲ್ಲಿ ಶಾಖೆಗೆ ಭೇಟಿ ನೀಡಿದ್ದ ಗಾಂಧಿ: ಭಾಗ್ವತ್‌
ಹೊಸದಿಲ್ಲಿ: ದೇಶ ವಿಭಜನೆಯ ವೇಳೆ ಮಹಾತ್ಮಾಗಾಂಧಿ ಆರೆಸ್ಸೆಸ್‌ ಶಾಖೆಗೆ ಭೇಟಿ ನೀಡಿ, ಸ್ವಯಂಸೇವಕರೊಂದಿಗೆ ಮಾತುಕತೆ ನಡೆಸಿದ್ದರು. ಅಷ್ಟೇ ಅಲ್ಲ, ದೇಶದ ಬಗ್ಗೆ ಸ್ವಯಂಸೇವಕರಿಗೆ ಇರುವ ಪ್ರೀತಿ ಮತ್ತು ಸ್ವಯಂಸೇವಕರಲ್ಲಿ ಜಾತಿ ಹಾಗೂ ಜನಾಂಗದ ಬಗ್ಗೆ ತಾರತಮ್ಯ ಭಾವ ಇಲ್ಲದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗ್ವತ್‌ ಹೇಳಿದ್ದಾರೆ. ಹೊಸದಿಲ್ಲಿಯ ಶಾಖೆಯಲ್ಲಿ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಬುಧವಾರ ಗಾಂಧಿ ಸ್ಮರಣೆ ಮಾಡಲಾಯಿತು. ಈ ವೇಳೆ ಸ್ವಯಂಸೇವಕರನ್ನು ಉದ್ದೇಶಿಸಿ ಭಾಗ್ವತ್‌ ಮಾತನಾಡಿದರು. ಗಾಂಧಿ ತಮ್ಮ ನಿವಾಸದ ಬಳಿ ದಿಲ್ಲಿಯಲ್ಲಿನ ಶಾಖೆಗೆ ಆಗಮಿಸಿದ ವರದಿ 1947ರ ಸೆ. 27ರ ಹರಿಜನ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಅಷ್ಟೇ ಅಲ್ಲ, 1936 ರಲ್ಲಿ ಸಂಘದ ವಾರ್ಧಾ ಬಳಿಯ ಶಾಖೆಗೆ ಭೇಟಿ ನೀಡಿದ್ದರು. ಮರುದಿನ ಅವರನ್ನು ಆರೆಸ್ಸೆಸ್‌ ಸಂಸ್ಥಾಪಕ ಕೆ.ಬಿ ಹೆಡೆವಾರ್‌ ಕೂಡ ಭೇಟಿ ಮಾಡಿದ್ದರು ಎಂದರು.

ಐನ್‌ಸ್ಟೀನ್‌ ಮಾದರಿ ಪ್ರಚಾರ ಬೇಕು
ಮಹಾತ್ಮಾಗಾಂಧಿ ವಿಶ್ವದ ಕೋಟ್ಯಂತರ ಜನರಿಗೆ ಸ್ಫೂರ್ತಿ ತುಂಬುತ್ತಿರುವ ಮಾರ್ಗದರ್ಶಕರು ಎಂದು ಪ್ರಧಾನಿ ಬಣ್ಣಿಸಿದ್ದಾರೆ. “ದ ನ್ಯೂಯಾರ್ಕ್‌ ಟೈಮ್ಸ್‌’ ಪತ್ರಿಕೆಗೆ ವಿಶೇಷ ಲೇಖನ ಬರೆದಿರುವ ಅವರು, ಮಹಾತ್ಮಾ ಉತ್ತಮ ಶಿಕ್ಷಕ ಕೂಡ ಹೌದು ಎಂದಿದ್ದಾರೆ. ಮುಂದಿನ ಪೀಳಿಗೆಗಾಗಿ ಗಾಂಧಿ ತತ್ವಗಳನ್ನು ಪಸರಿಸಲು ಐನ್‌ಸ್ಟಿàನ್‌ ಚಾಲೆಂಜ್‌ ಹಮ್ಮಿಕೊಳ್ಳುವಂತೆ ಕರೆ ನೀಡಿದ್ದಾರೆ. ಗಾಂಧಿ ಬಗ್ಗೆ ಮಾತನಾಡಿದ್ದ ಐನ್‌ಸ್ಟೀನ್‌, ಮುಂದಿನ ತಲೆಮಾರುಗಳು ಇಂಥ ಒಬ್ಬ ವ್ಯಕ್ತಿ ಬದುಕಿದ್ದರು ಎಂಬುದನ್ನು ನಂಬುವುದೂ ಇಲ್ಲ ಎಂದಿದ್ದರು. ಹೀಗಾಗಿ, ಗಾಂಧಿ ತತ್ತ್ವಗಳನ್ನು ನಾವು ಮುಂದಿನ ತಲೆಮಾರಿಗೆ ತಲುಪಿಸುವುದು ಹೇಗೆ ಎಂದು ಚಿಂತಕರು, ಉದ್ಯಮಿಗಳು ಮತ್ತು ತಂತ್ರಜ್ಞಾನ ಪರಿಣತರಲ್ಲಿ ಕೇಳಿದ್ದು, ಇವರು ಈ ನಿಟ್ಟಿನಲ್ಲಿ ಮುಂದಾಳತ್ವ ವಹಿಸಬೇಕಿದೆ ಎಂದಿದ್ದಾರೆ.

ಅಂಚೆ ಚೀಟಿ ಬಿಡುಗಡೆ
ಮಹಾತ್ಮಾಗಾಂಧಿ ಅವರ 150ನೇ ಜನ್ಮದಿನ ಪ್ರಯುಕ್ತ ಪ್ಯಾಲೆಸ್ತೀನ್‌ ವಿಶೇಷ ಅಂಚೆಚೀಟಿ ಬಿಡುಗಡೆ ಮಾಡಿದೆ. ರಮಲ್ಲಾದಲ್ಲಿರುವ ಭಾರತದ ಪ್ರತಿನಿಧಿ ಸುನಿಲ್‌ ಕುಮಾರ್‌ ಸಮ್ಮುಖದಲ್ಲಿ ಅಲ್ಲಿನ ದೂರಸಂಪರ್ಕ ಮತ್ತು ಮಾಹಿತಿ ಸಚಿವ ಇಶಾಕ್‌ ಸೆದೆರ್‌ ಅದನ್ನು ಬಿಡುಗಡೆ ಮಾಡಿದ್ದಾರೆ. ಮಹಾತ್ಮಾ ಪಾಲಿಸುತ್ತಿದ್ದ ಅಂಹಿಸೆ, ಮೌಲ್ಯ, ಬುದ್ಧಿವಂತಿಕೆಗಳು ಮಾನವತೆಗೆ ನಿರಂತರ ದಾರಿ ದೀಪವೆಂದು ಸೆದೆರ್‌ ಕೊಂಡಾಡಿದರು.

ನೇಪಾಲದಲ್ಲಿ ಪ್ರತಿಮೆ
ಭಾರತ ನೆರೆಯ ರಾಷ್ಟ್ರ ನೇಪಾಲದಲ್ಲಿ ಮೊದಲ ಬಾರಿಗೆ ಮಹಾತ್ಮಾ ಗಾಂಧಿ ಪ್ರತಿಮೆ ಅನಾ ವರಣ ಮಾಡಲಾಗಿದೆ. ರಾಜಧಾನಿ ಕಾಠ್ಮಂಡು ವಿನಲ್ಲಿ ಇರುವ ಭಾರತದ ರಾಯಭಾರ ಕಚೇರಿಯಲ್ಲಿ ಪ್ರತಿಮೆ ಸ್ಥಾಪನೆ ಮಾಡಲಾಗಿದೆ. ನೇಪಾಲದಲ್ಲಿನ ಭಾರತದ ರಾಯಭಾರಿ ಮಂಜೀವ್‌ ಸಿಂಗ್‌ ಪುರಿ ಅದನ್ನು ಅನಾವರಣಗೊಳಿಸಿದರು.

ಬಿಜೆಪಿ ವಿರುದ್ಧ ಟೀಕೆ
ಹೊಸದಿಲ್ಲಿ: ಅಧಿಕಾರಕ್ಕಾಗಿ ಹಪಹಪಿಸುವವರು ಮತ್ತು ಸುಳ್ಳಿನ ರಾಜಕೀಯ ಮಾಡುವವರಿಗೆ ಮಹಾತ್ಮಾ ಗಾಂಧಿಯವರ ತತ್ವ ಅರ್ಥವಾಗುವುದಿಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್‌ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಮಹಾತ್ಮಾ ಗಾಂಧಿಯವರ 150ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯನ್ನು ಪರೋಕ್ಷವಾಗಿ ಟೀಕಿಸಿರುವ ಅವರು ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಗಾಂಧಿಯ ಆತ್ಮಕ್ಕೆ ನೋವಾಗಿದೆ ಎಂದು ಟೀಕಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ