ಇಂದು ಭಾರತಕ್ಕೆ ರಷ್ಯಾ ಅಧ್ಯಕ್ಷ ಪುತಿನ್ ಭೇಟಿ; ಒಂದೇ ದಿನದಲ್ಲಿ ಹಲವು ಒಪ್ಪಂದ ಸಾಧ್ಯತೆ
Team Udayavani, Dec 6, 2021, 6:10 AM IST
ಹೊಸದಿಲ್ಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಸೋಮವಾರ ಭಾರತಕ್ಕೆ ಭೇಟಿ ನೀಡಲಿದ್ದು, ವ್ಯಾಪಾರ, ಇಂಧನ, ಸಂಸ್ಕೃತಿ, ರಕ್ಷಣೆ, ಬಾಹ್ಯಾಕಾಶ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಹಲವು ಒಪ್ಪಂದಗಳಿಗೆ ಉಭಯ ರಾಷ್ಟ್ರಗಳು ಸಹಿ ಹಾಕಲಿವೆ.
ಅದರಲ್ಲೂ ವಿಶೇಷವಾಗಿ ಭಾರತದಲ್ಲೇ ಎಕೆ-203 ರೈಫಲ್ಗಳ ತಯಾರಿಕೆಗೆ ರಷ್ಯಾದ ಸಹಭಾಗಿತ್ವ ಪಡೆಯುವ ಒಪ್ಪಂದಕ್ಕೂ ಸಹಿ ಬೀಳಲಿದೆ. ಈ ಮೂಲಕ ಭಾರತ ಮತ್ತು ರಷ್ಯಾ ನಡುವಿನ ಹಳೆಯ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸಲು ಉಭಯ ದೇಶಗಳು ಸಜ್ಜಾಗಿವೆ.
ಅಲ್ಲದೆ ಎಲ್ಎಸಿಯಲ್ಲಿ ಚೀನ ದುಸ್ಸಾಹಸಕ್ಕೆ ಕೈಹಾಕುತ್ತಾ ಭಾರತವನ್ನು ಕೆಣಕುತ್ತಿರುವ ಹಿನ್ನೆಲೆಯಲ್ಲಿ ಪುತಿನ್ ಅವರ ಈ ಅಲ್ಪಾವಧಿಯ ಭೇಟಿ ಮಹತ್ವ ಪಡೆದಿದೆ.
ರೆಸಿಪ್ರೋಕಲ್ ಎಕ್ಸ್ಚೇಂಜ್ ಆಫ್ ಲಾಜಿಸ್ಟಿಕ್ಸ್ ಅಗ್ರೀಮೆಂಟ್(ರೀಲೋಸ್)ಗೆ ಕೂಡ ಭಾರತ ಮತ್ತು ರಷ್ಯಾ ಸಹಿ ಹಾಕುವ ನಿರೀಕ್ಷೆಯಿದೆ.
ಈ ಒಪ್ಪಂದ ನಡೆದರೆ, ಎರಡೂ ದೇಶಗಳ ಸೇನೆಗಳು ಬೇರೊಂದು ನೆಲದಲ್ಲಿ ಕಾರ್ಯನಿರ್ವಹಿಸುವ ವೇಳೆ ಪರಸ್ಪರ ಇಂಧನ ಹಾಗೂ ಇತರ ಸೌಕರ್ಯಗಳ ನೆರವು ಪಡೆ ಯಲು ಅನುಕೂಲವಾಗಲಿದೆ.
ಇದನ್ನೂ ಓದಿ:ಕತ್ರೀನಾ – ವಿಕ್ಕಿ ಕೌಶಲ್ ವಿವಾಹ :7 ಶ್ವೇತ ವರ್ಣದ ಕುದುರೆ ಜತೆಗೆ ವಿಕ್ಕಿ ಕೌಶಲ್ ಬಾರಾತ್
ರಷ್ಯಾದಿಂದ ಎಸ್-400 ಕ್ಷಿಪಣಿ ರಕ್ಷಣ ವ್ಯವಸ್ಥೆಯನ್ನು ಖರೀದಿಸಲು ಭಾರತ ಮುಂದಾಗಿರುವುದಕ್ಕೆ ಅಮೆರಿಕ ಈಗಾಗಲೇ ವಿರೋಧ ವ್ಯಕ್ತ ಪಡಿಸಿದೆ. ಆದರೂ ರಕ್ಷಣ ಸಾಮಗ್ರಿಗಳ ಖರೀದಿಯಲ್ಲಿ ವ್ಯೂಹಾತ್ಮಕ ಸ್ವಾಯತ್ತೆಯನ್ನು ಮುಂದುವರಿಸುವುದಾಗಿ ಭಾರತ ಸ್ಪಷ್ಟಪಡಿಸಿದೆ.
ಪುತಿನ್ ಅವರು ಸೋಮವಾರ ಬೆಳಗ್ಗೆ ಭಾರತಕ್ಕೆ ಬಂದಿಳಿದು, ಪ್ರಧಾನಿ ಮೋದಿ ಅವರು ಆಯೋಜಿಸಿರುವ ಔತಣಕೂಟದಲ್ಲಿ ಪಾಲ್ಗೊಂಡು ರಾತ್ರಿಯೇ ರಷ್ಯಾಗೆ ಮರಳಲಿದ್ದಾರೆ. ಕೊರೊನಾ ಸೋಂಕು ವ್ಯಾಪಿಸಲು ಆರಂಭವಾದ ಬಳಿಕ ಪುತಿನ್ ಅವರ ಎರಡನೇ ವಿದೇಶ ಭೇಟಿ ಇದಾಗಿದೆ.