ಶಬರಿಮಲೆ: ದೇಗುಲ ಪ್ರವೇಶಿಸಿದ್ದು ಇಬ್ಬರು ಮಾತ್ರ
Team Udayavani, Feb 5, 2019, 12:30 AM IST
ತಿರುವನಂತಪುರ: ಶಬರಿಮಲೆ ದೇಗುಲ ಪ್ರವೇಶಿಸಲು 10ರಿಂದ 50 ವರ್ಷದೊಳಗಿನ ಮಹಿಳೆಯರಿಗೆ ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ಅನಂತರ ಈವರೆಗೆ ಈ ವಯೋಮಾನದ ಇಬ್ಬರು ಮಹಿಳೆಯರು ಮಾತ್ರ ಅಯ್ಯಪ್ಪ ದೇಗುಲ ಪ್ರವೇಶಿಸಿದ್ದಾರೆ ಎಂದು ಕೇರಳ ಸರಕಾರ ಸ್ಪಷ್ಟನೆ ನೀಡಿದೆ. ಈ ಮೂಲಕ ಸರಕಾರವು ತನ್ನ ಹಿಂದಿನ ಹೇಳಿಕೆಯಿಂದ ಸಂಪೂರ್ಣ ಉಲ್ಟಾ ಹೊಡೆದಂತಾಗಿದೆ.
ಸದನದಲ್ಲಿ ಕಾಂಗ್ರೆಸ್ ಕೇಳಿದ ಪ್ರಶ್ನೆಗೆ ಲಿಖೀತ ರೂಪದಲ್ಲಿ ಉತ್ತರಿ ಸಿರುವ ಸರಕಾರ, ಈವರೆಗೆ ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸಿದ್ದಾರೆ. ಮೂರನೇ ಮಹಿಳೆಯಾದ ಶ್ರೀಲಂಕಾ ಮೂಲದ ಶಶಿಕಲಾ (47) ಅವರ ದೇಗುಲ ಪ್ರವೇಶ ಇನ್ನೂ ಖಾತ್ರಿ ಯಾಗಿಲ್ಲ ಎಂದಿದೆ. ಇದೇ ವಿಚಾರವಾಗಿ ಜ.18ರಂದು ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದ ಕೇರಳ, 50 ವರ್ಷದೊಳಗಿನ 51 ಮಹಿಳೆಯರು ಶಬರಿಮಲೆ ಪ್ರವೇಶಿಸಿದ್ದಾಗಿ ಹೇಳಿತ್ತು. ಅಫಿಡವಿಟ್ನಲ್ಲಿ ಇಬ್ಬರು ಗಂಡಸರ ಹೆಸರುಗಳು ನುಸುಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೇ ಪಟ್ಟಿಯನ್ನು ಪರಿಷ್ಕರಿಸಿದ್ದ ಸರಕಾರ, ಕೇವಲ 17 ಮಂದಿ ಮಹಿಳೆಯರು ಮಾತ್ರ ಪ್ರವೇಶಿಸಿದ್ದರು ಎಂದಿತ್ತು.