ಅಮೇಠಿಯ ಪ್ರಭಾವಿ ರಾಜಕಾರಣಿ ಸಂಜಯ್ ಸಿನ್ನಾ ಕಾಂಗ್ರೆಸ್ ಗೆ ಗುಡ್ ಬೈ, ಬಿಜೆಪಿ ಸೇರ್ಪಡೆ
Team Udayavani, Jul 30, 2019, 6:11 PM IST
ನವದೆಹಲಿ: ಅಮೇಠಿಯ ಪ್ರತಿಷ್ಠಿತ ಕುಟುಂಬದ ಸಂಜಯ್ ಸಿನ್ನಾ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಬುಧವಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದ್ದಾರೆ.
ಸಂಜಯ್ ಸಿನ್ನಾ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದು ಅಸ್ಸಾಂನ ರಾಜ್ಯಸಭಾ ಸದಸ್ಯರಾಗಿದ್ದರು. ರಾಜ್ಯಸಭಾ ಸದಸ್ಯತ್ವಕ್ಕೂ ಈ ಸಂದರ್ಭದಲ್ಲಿ ರಾಜೀನಾಮೆ ನೀಡಿದ್ದಾರೆ. ಸಿನ್ನಾ ಅವರ ರಾಜೀನಾಮೆಯನ್ನು ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರು ಸ್ವೀಕರಿಸಿರುವುದಾಗಿ ವರದಿ ಹೇಳಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಜಯ್ ಸಿನ್ನಾ, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ತಾನು ಬುಧವಾರ ಬಿಜೆಪಿ ಸೇರ್ಪಡೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. 1990ರಲ್ಲಿ ಸಿನ್ನಾ ಬಿಜೆಪಿ ಪಕ್ಷದಲ್ಲಿದ್ದು, ಲೋಕಸಭೆಗೆ ಆಯ್ಕೆಗೊಂಡಿದ್ದರು. ಉತ್ತರಪ್ರದೇಶದ ಅಮೇಠಿ ಪ್ರದೇಶದಲ್ಲಿ ಪ್ರಭಾವಿ ರಾಜಕಾರಣಿಯಾಗಿದ್ದರು ಎಂದು ವರದಿ ವಿವರಿಸಿದೆ.