ಯೆಸ್ಬಿಐ ಮರುಜೀವ
Team Udayavani, Mar 8, 2020, 6:00 AM IST
ಹೊಸದಿಲ್ಲಿ: ಯೆಸ್ ಬ್ಯಾಂಕ್ಗೆ ಮರುಜೀವ ನೀಡುವ ನಿಟ್ಟಿನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಹೆಜ್ಜೆ ಇರಿಸಿದೆ. ಯೆಸ್ ಬ್ಯಾಂಕ್ನ 2,450 ಕೋ.ರೂ. ಮೌಲ್ಯದ ಷೇರುಗಳನ್ನು ಖರೀದಿಸಲು ಅದು ನಿರ್ಧರಿಸಿದೆ.
ಒಂದು ಷೇರಿಗೆ 10 ರೂ.ಗಳಂತೆ 2,450 ಕೋಟಿ ರೂ. ಮೌಲ್ಯದ 245 ಕೋ. ಷೇರು ಖರೀದಿ ಮಾಡುವುದಾಗಿ ಎಸ್ಬಿಐ ಶನಿವಾರ ಪ್ರಕಟಿಸಿದೆ. ಯೆಸ್ ಬ್ಯಾಂಕ್ನ ಒಟ್ಟಾರೆ ಷೇರುಗಳ ಪೈಕಿ ಶೇ.49ರಷ್ಟನ್ನು ಈ ಷೇರುಗಳು ತುಂಬಿದಂತಾಗಲಿದೆ. ಬಂಡವಾಳ ಹೂಡಿ ದಂದಿನಿಂದ 3 ವರ್ಷಗಳವರೆಗೆ ತನ್ನ ಪಾಲನ್ನು ಶೇ.26ಕ್ಕಿಂತ ಕೆಳಗಿಳಿಸದಿರಲು ಎಸ್ಬಿಐ ನಿರ್ಧರಿಸಿದೆ.
ಯೆಸ್ ಬ್ಯಾಂಕ್ನಲ್ಲಿ ಹೂಡಿಕೆ ಮಾಡಲು ಎಸ್ಬಿಐ ಆಡಳಿತ ಮಂಡಳಿ ತಾತ್ವಿಕ ಒಪ್ಪಿಗೆ ನೀಡಿದ್ದು, ಬಂಡವಾಳ ಹೂಡಿಕೆಗೆ 10 ಸಾವಿರ ಕೋ.ರೂ.ಗಳ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ಬ್ಯಾಂಕ್ ಮುಖ್ಯಸ್ಥ ರಜನೀಶ್ ಕುಮಾರ್ ತಿಳಿಸಿದ್ದಾರೆ.
ಅಲ್ಲದೆ ಯೆಸ್ ಬ್ಯಾಂಕ್ನ ಹೊಸ ಆಡಳಿತ ಮಂಡಳಿಯಲ್ಲಿ ಸಿಇಒ,ಎಂಡಿ, ಕಾರ್ಯಕಾರಿಯೇತರ ಮುಖ್ಯಸ್ಥರು ಮತ್ತು ಕಾರ್ಯಕಾರಿಯೇತರ ನಿರ್ದೇಶಕರು ಇರಲಿದ್ದಾರೆ. ಅದರ ಎಲ್ಲ ಉದ್ಯೋಗಿ ಗಳು ಈಗಿರುವ ವೇತನದಲ್ಲೇ ಮುಂದು ವರಿಯಲಿದ್ದು, ಕನಿಷ್ಠ 1 ವರ್ಷ ಹಾಲಿ ನಿಯಮ, ಷರತ್ತುಗಳೇ ಅನ್ವಯಿಸಲಿವೆ ಎಂದು ಎಸ್ಬಿಐ ತಿಳಿಸಿದೆ.